janadhvani

Kannada Online News Paper

ಸೌದಿ: ಉಮ್ರಾ ಯಾತ್ರಿಕರಿಗೆ ಯಾವುದೇ ವಿಮಾನ ನಿಲ್ದಾಣವನ್ನು ಆಯ್ಕೆ ಮಾಡಲು ಅವಕಾಶ

ಹೊಸ ಉಮ್ರಾ ವೀಸಾ ವ್ಯವಸ್ಥೆಯು ವಲಸಿಗರಿಗೆ ಹೆಚ್ಚಿನ ಪ್ರಯೋಜನಕಾರಿ

ರಿಯಾದ್ : ಉಮ್ರಾಕ್ಕಾಗಿ ಸೌದಿ ಅರೇಬಿಯಾಕ್ಕೆ ಆಗಮಿಸುವವರಿಗೆ ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ಹೆಚ್ಚಿನ ರಿಯಾಯಿತಿಗಳನ್ನು ಘೋಷಿಸಿದೆ. ಸೌದಿ ಅರೇಬಿಯಾದ ಯಾವುದೇ ವಿಮಾನ ನಿಲ್ದಾಣವನ್ನು ಉಮ್ರಾ ಯಾತ್ರಿಗಳ ನಿರ್ಗಮನ ಮತ್ತು ಆಗಮನಕ್ಕಾಗಿ ಬಳಸಬಹುದು.

ಮೂರು ತಿಂಗಳ ಕಾಲಾವಧಿಯ ವೀಸಾ ಮುಗಿದ ನಂತರ, ಅದೇ ವರ್ಷದಲ್ಲಿ ಮತ್ತೆ ವಿಸಾಕೆ ಅರ್ಜಿ ಸಲ್ಲಿಸಬಹುದು. ಹೊಸ ಉಮ್ರಾ ವೀಸಾ ವ್ಯವಸ್ಥೆಯು ವಲಸಿಗರಿಗೆ ಹೆಚ್ಚಿನ ಪ್ರಯೋಜನಕಾರಿಯಾಗಲಿದೆ.

ಈ ಹಿಂದೆ ಹಜ್ ಉಮ್ರಾ ಯಾತ್ರಿಕರಿಗಾಗಿ ಜಿದ್ದಾ ಮತ್ತು ಮದೀನಾ ವಿಮಾನ ನಿಲ್ದಾಣಗಳನ್ನು ನಿಗದಿಪಡಿಸಲಾಗಿತ್ತು. ಈ ನಿಯಮದಲ್ಲಿ ಬದಲಾವಣೆ ತರಲಾಗಿದೆ. ಉಮ್ರಾ ಯಾತ್ರಿಕರು ಯಾವುದೇ ವಿಮಾನ ನಿಲ್ದಾಣದ ಮೂಲಕ ಸೌದಿ ಅರೇಬಿಯಾಕ್ಕೆ ಆಗಮಿಸಲು ಮತ್ತು ನಿರ್ಗಮಿಸಲು ಅನುಮತಿಸಲಾಗಿದೆ. ಇದರೊಂದಿಗೆ, ಯಾತ್ರಾರ್ಥಿಗಳು ಸೌದಿ ಪ್ರವಾಸೋದ್ಯಮದ ಯಾವುದೇ ಭಾಗ ಮತ್ತು ಐತಿಹಾಸಿಕ ಕೇಂದ್ರಗಳಿಗೆ ಭೇಟಿ ನೀಡಬಹುದು. ಮತ್ತು ಅವರೊಂದಿಗೆ ಪ್ರಯಾಣಿಸಲು ಬಯಸುವ ಸಂಬಂಧಿಕರಿಗೂ ಇದು ಅನುಕೂಲಕರವಾಗಿರುತ್ತದೆ.

ಈ ಹಿಂದೆ ಉಮ್ರಾ ವೀಸಾ ಕಾಲಾವಧಿ ಒಂದು ತಿಂಗಳಾಗಿತ್ತು.ಇದೀಗ ಮೂರು ತಿಂಗಳವರೆಗೆ ಉಮ್ರಾ ವೀಸಾದಲ್ಲಿ ಉಳಿಯಬಹುದು. ಏಜೆನ್ಸಿಗಳ ಮೂಲಕ ಆಗಮಿಸಿದ್ದರೆ, ಹೆಚ್ಚುವರಿ ದಿನದ ವೆಚ್ಚವನ್ನು ಭರಿಸಬೇಕಾಗುತ್ತದೆ.
ಮೂರು ತಿಂಗಳು ಪೂರ್ಣಗೊಂಡ ನಂತರ, ನೀವು ಸೌದಿ ಅರೇಬಿಯಾವನ್ನು ತೊರೆಯಬೇಕು. ಮತ್ತೆ ಅದೇ ವರ್ಷದಲ್ಲಿ ಹೊಸ ವೀಸಾದೊಂದಿಗೆ ಆಗಮಿಸಬಹುದಾಗಿದೆ.

ಹೊಸ ವಿಧಾನದೊಂದಿಗೆ ದೇಶದ ಪ್ರವಾಸೋದ್ಯಮ ಕ್ಷೇತ್ರವನ್ನು ಸಕ್ರಿಯಗೊಳಿಸುವುದಾಗಿದೆ ಸೌದಿ ಅರೇಬಿಯಾದ ಗುರಿ.

ಸಂದರ್ಶಕ ವೀಸಾ ಮೂಲಕ ಕುಟುಂಬಸ್ಥರನ್ನು ಕರೆತರಲು ಸಾಧ್ಯವಾಗದ ವಲಸಿಗರಿಗೂ ಹೊಸ ನಿರ್ಧಾರದಿಂದ ಅನುಕೂಲವಾಗಲಿದೆ. ಆನ್‌ಲೈನ್ ಮೂಲಕ ಸ್ವಂತವಾಗಿ ಉಮ್ರಾ ಬುಕ್ಕಿಂಗ್ ವ್ಯವಸ್ಥೆಯನ್ನೂ ಸಚಿವಾಲಯ ಸಿದ್ಧಪಡಿಸಿದೆ.

error: Content is protected !! Not allowed copy content from janadhvani.com