janadhvani

Kannada Online News Paper

ಮಸೀದಿಗೆ ಸಗಣಿ ಎರಚಿದಾತನ ಬಂಧನ: ಆರೋಪಿ ಮಾನಸಿಕ ಅಸ್ವಸ್ಥ- ಪೋಲೀಸ್

ಘಟನೆ ಪೂರ್ವ ಯೋಜಿತವಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಣ್ಣೂರು(ಕೇರಳ) :ಇಲ್ಲಿನ ಮುಹ್ಯುದ್ದೀನ್ ಮಸೀದಿಗೆ ಸಗಣಿ ಎರಚಿದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಇರಿನಾವ್ ಮೂಲದ ದಸ್ತಗೀರ್ ಬಂಧಿತ ಆರೋಪಿ. ಈತ ಮಾನಸಿಕ ಅಸ್ವಸ್ಥನೆಂದು ಶಂಕಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಆರ್. ಇಳಂಗೋ ಹೇಳಿದರು. ಘಟನೆ ಪೂರ್ವ ಯೋಜಿತವಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಸಂಜೆ ಕಣ್ಣೂರು ಮಾರುಕಟ್ಟೆಯ ಮುಹ್ಯಿದ್ದೀನ್ ಮಸೀದಿಯಲ್ಲಿ ಸಗಣಿ ಪತ್ತೆಯಾಗಿತ್ತು.ಮಸೀದಿಯ ಮಿಹ್ರಾಬ್ ಮತ್ತು ಮಿಂಬರ್ ನಡುವೆ ಮತ್ತು ಮಸೀದಿಯ ಹೊರಗೆ ಸಗಣಿ ಕಂಡುಬಂದಿದೆ. ಶುದ್ಧೀಕರಣಕ್ಕೆ ಬಳಸುವ ನೀರಿನ ಹೌಲ್ ನಲ್ಲೂ ಸಗಣಿಯನ್ನು ಬೆರೆಸಲಾಗಿತ್ತು.

ಶುಕ್ರವಾರದ ಪ್ರಾರ್ಥನೆ ಮುಗಿಸಿ ವಿಶ್ವಾಸಿಗಳು ಮಸೀದಿಯಿಂದ ಹೊರಬಂದ ಬಳಿಕ ಈ ಘಟನೆ ನಡೆದಿದೆ. ಮಸೀದಿಯ ಉದ್ಯೋಗಿ ಅಬ್ದುಲ್ ಅಝೀಝ್ ಅವರು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮೊದಲ ಬಾರಿಗೆ ಮಸೀದಿಯೊಳಗೆ ಸಗಣಿಯನ್ನು ಕಂಡಿದ್ದು, ನಂತರ ಮಸೀದಿಯ ಆಡಳಿತ ಸಮಿತಿಗೆ ತಿಳಿಸಿದ್ದರು.

ಮೂವರ ಗುಂಪು ಸಗಣಿ ಎರಚಿದೆ ಎಂದು ಪ್ರಾಥಮಿಕವಾಗಿ ಆರೋಪಿಸಲಾಗಿತ್ತು. ಘಟನೆಯ ನಂತರ ಕಣ್ಣೂರು ಡಿಐಜಿ ರಾಹುಲ್ ಆರ್. ನಾಯರ್, ನಗರ ಪೊಲೀಸ್ ಆಯುಕ್ತ ಆರ್. ಇಳಂಗೋ ಮತ್ತಿತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಇದರಿಂದ ಸಿಕ್ಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ.