janadhvani

Kannada Online News Paper

ಬೋರ್ಡಿಂಗ್ ಪಾಸ್ ಫೋಟೋಗಳನ್ನು ಹಂಚಿಕೊಳ್ಳದಂತೆ ದುಬೈ ಪೊಲೀಸ್ ಎಚ್ಚರಿಕೆ

ಬೋರ್ಡಿಂಗ್ ಪಾಸ್‌ಗಳು ಬಾರ್‌ಕೋಡ್‌ಗಳು ಮತ್ತು ಇತರ ಮಾಹಿತಿಯನ್ನು ಒಳಗೊಂಡಿರುತ್ತದೆ

ದುಬೈ : ಬೋರ್ಡಿಂಗ್ ಪಾಸ್ ಫೋಟೋಗಳು ಮತ್ತು ಪ್ರಯಾಣದ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳದಂತೆ ದುಬೈ ಪೊಲೀಸರು ಎಚ್ಚರಿಸಿದ್ದಾರೆ. ಇಂತಹ ಮಾಹಿತಿಗಳನ್ನು ವಂಚಕರು ಮತ್ತು ಕಳ್ಳರು ಬಳಸಿಕೊಳ್ಳಬಹುದು ಎಂದು ದುಬೈ ಪೊಲೀಸ್ ಸೈಬರ್ ಕ್ರೈಂ ಕಾಂಬಾಟಿಂಗ್ ವಿಭಾಗದ ನಿರ್ದೇಶಕ ಕರ್ನಲ್ ಸಯೀದ್ ಅಲ್ ಹಜರಿ ಯುಎಇ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಯುಎಇ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ವಿಮಾನ ಪ್ರಯಾಣಿಕರ ದಟ್ಟಣೆ ಉಂಟಾಗಲಿರುವ ಬೇಸಿಗೆ ಸೀಝನ್ ಆರಂಭಗೊಂಡ ವೇಳೆಯಲ್ಲೇ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಂದ ಈ ಎಚ್ಚರಿಕೆ ಬಂದಿದೆ. ಪ್ರಯಾಣದ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ಯುಎಇಯಲ್ಲಿನ ಪ್ರಮುಖ ವ್ಯಕ್ತಿಯೊಬ್ಬರನ್ನು ದರೋಡೆ ಮಾಡಿದ ಘಟನೆ ನಡೆದಿದೆ ಎಂದು ಅವರು ಹೇಳಿದರು.

ಬೋರ್ಡಿಂಗ್ ಪಾಸ್‌ಗಳು ಬಾರ್‌ಕೋಡ್‌ಗಳು ಮತ್ತು ಇತರ ಮಾಹಿತಿಯನ್ನು ಒಳಗೊಂಡಿರುತ್ತದೆ. ಇವುಗಳನ್ನು ಪ್ರಯಾಣಿಕರ ವೈಯಕ್ತಿಕ ಮಾಹಿತಿ ಕದಿಯಲು ಅಥವಾ ಅಪರಾಧ ಎಸಗಲು ಬಳಸಬಹುದೆಂದು ಅವರು ಹೇಳಿದ್ದಾರೆ.

‘ವಿಮಾನದಲ್ಲಿ ಬಿಸಿನೆಸ್ ಕ್ಲಾಸ್ ಅಥವಾ ಫಸ್ಟ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿದ್ದೇವೆ ಎಂದು ತೋರಿಸಲು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ದಾಖಲೆಗಳನ್ನು ಪೋಸ್ಟ್ ಮಾಡುತ್ತಾರೆ. ಆದರೆ ಅಪರಾಧಿಗಳಿಗೆ ತಮ್ಮ ವೈಯಕ್ತಿಕ ಮಾಹಿತಿಯನ್ನು ಪಡೆಯಲು ಇದು ಎಡೆ ಮಾಡಿ ಕೊಡಲಿದೆ’ ಎಂದು ಕರ್ನಲ್ ಅಲ್-ಹಜರಿ ಹೇಳಿದರು.

“ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊಗಳ ಮೂಲಕ ತಮ್ಮ ಪ್ರಯಾಣದ ಮಾಹಿತಿಯನ್ನು ಸಂಪೂರ್ಣವಾಗಿ ವಿವರಿಸುವವರೂ ಇದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅನುಯಾಯಿಗಳನ್ನು ಪಡೆಯಲು ಈ ಕೆಲಸಗಳನ್ನು ಮಾಡಲಾಗುತ್ತಿದೆ, ಆದರೂ, ಅಪರಾಧಿಗಳು ತಮ್ಮ ಪ್ರಯಾಣದ ಮಾಹಿತಿಯನ್ನು ನಿಖರವಾಗಿ ತಿಳಿದ ನಂತರ ತಮ್ಮ ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ಕಲೆ ಹಾಕಿ ಲೂಟಿ ನಡೆಸಲು ಕಾರಣವಾಗಬಹುದು.

ವೈಯಕ್ತಿಕ ಮಾಹಿತಿಯನ್ನು ಪಡೆದುಕೊಳ್ಳಲು ಕ್ರಿಮಿನಲ್ ಗ್ಯಾಂಗ್‌ಗಳು ಯಾವುದೇ ಹಂತಕ್ಕೂ ತಲುಪುತ್ತಾರೆ ಎಂಬ ಅಂಶವನ್ನು ಹಲವರು ಅಷ್ಟೊಂದು ಗೌರವದಿಂದ ಕಾಣುತ್ತಿಲ್ಲ. ಪ್ರಯಾಣಿಕರು ತಮ್ಮ ವೈಯಕ್ತಿಕ ವಿವರಗಳು, ಬೋರ್ಡಿಂಗ್ ಪಾಸ್ ಚಿತ್ರಗಳು ಅಥವಾ ಪ್ರಯಾಣದ ಯೋಜನೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗಪಡಿಸಬಾರದು ಎಂದು ಅವರು ಹೇಳಿದರು.

error: Content is protected !! Not allowed copy content from janadhvani.com