ಮಂಗಳೂರು: ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹಿಜಾಬ್ ಧಾರಿ ಸೋದರಿಯರ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ಬದಲಾಗಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದೇನೆ. ಆದರೆ ಆ ಪ್ರತಿಕ್ರಿಯೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ತಿರುಚಿ ಅಪಪ್ರಚಾರ ಮಾಡುವ ಮೂಲಕ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ರಾಜ್ಯ ವಿಧಾನ ಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ತಿಳಿಸಿದ್ದಾರೆ.
ಮಾಧ್ಯಮ ಜೊತೆ ಮಾತನಾಡಿದ ಯು.ಟಿ.ಖಾದರ್, ನನ್ನ ಹೇಳಿಕೆಯನ್ನು ತಿರುಚುವ ಮೂಲಕ ಕೆಲವರು ದುರ್ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ವಿಘ್ನ ಸಂತೋಷಿಗಳು ಅವರ ವಿಕೃತ ಮನಸ್ಸನ್ನು ಅನಾವರಣಗೊಳಿಸುತ್ತಿದ್ದಾರೆ. ಹಿಜಾಬ್ ಧಾರಿ ಸಹೋದರಿಯರ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಿಲ್ಲ. ನನ್ನ ಮಗಳೂ ಕೂಡ ಹಿಜಾಬ್ ಧರಿಸುತ್ತಾಳೆ ಎಂಬ ಪ್ರಜ್ಞೆ ನನಗಿದೆ.
ಆದರೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ಹಿಜಾಬ್ ವಿಚಾರವನ್ನು ಮುಂದಿಟ್ಟುಕೊಂಡು ಆ ಸಮಸ್ಯೆಯನ್ನು ಬಗೆಹರಿಸದೆ ಅದನ್ನು ಸದಾಕಾಲ ಜೀವಂತವಾಗಿರಿಸಿ ಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಅಂತಹವರನ್ನು ಗಮನದಲ್ಲಿಟ್ಟುಕೊಂಡ ನಾನು ಈ ದೇಶದ ಕಾನೂನಿಗೆ ಗೌರವ ಕೊಡದೆ ಸಮಸ್ಯೆಯನ್ನು ಸೃಷ್ಟಿಸುವವರು, ಸೌದಿ ಅರೇಬಿಯಾ ಅಥವಾ ಪಾಕಿಸ್ತಾನಕ್ಕೆ ಹೋದಾಗ ಅಲ್ಲಿನ ಕಾನೂನಿನ ಆಳ ಅರಿವು ಆಗುತ್ತದೆ ಮತ್ತು ಭಾರತದ ಕಾನೂನಿನ ಸೌಂದರ್ಯವೂ ತಿಳಿಯಬಹುದಾಗಿದೆ ಎಂದು ಹೇಳಿದ್ದೇನೆಯೇ ವಿನಃ ಹಿಜಾಬ್ ಧಾರಿ ಸಹೋದರಿಯ ಮನಸ್ಸನ್ನು ನೋಯಿಸುವಂತಹ ಯಾವುದೇ ಹೇಳಿಕೆಯನ್ನೂ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.