ಹೊಸದಿಲ್ಲಿ: ಪ್ರವಾದಿ ಮುಹಮ್ಮದ್ ರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಬಿಜೆಪಿ ಇದೀಗ ತನ್ನ ಇಬ್ಬರು ವಕ್ತಾರರಾದ ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ರನ್ನು ವಜಾ ಮಾಡಿದೆ ಎಂದು ವರದಿಯಾಗಿದೆ.
ನೂಪುರ್ ಶರ್ಮಾ ಅವರಿಗೆ ಪತ್ರ ಬರೆದಿರುವ ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್, ನಿಮ್ಮ ಹೇಳಿಕೆಯು ವಿವಿಧ ವಿಷಯಗಳಲ್ಲಿ ಪಕ್ಷದ ನಿಲುವಿಗೆ ವಿರುದ್ಧವಾಗಿರುವುದರಿಂದಪಕ್ಷದಿಂದ ಅಮಾನತುಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ನಿಮ್ಮ ಹೇಳಿಕೆಯು ಬಿಜೆಪಿಯ ಸಂವಿಧಾನದ ನಿಯಮ 10 (ಎ) ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪಾಠಕ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರವಾದಿ ಮುಹಮ್ಮದ್ ಅವರ ಕುರಿತು ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ಅವಹೇಳನಕಾರಿ ಹೇಳಿಕೆಗೆ ಭಾರೀ ಆಕ್ರೋಶವಾಗಿ ಹಿಂಸಾಚಾರ ನಡೆದ ಬೆನ್ನಿಗೆ “ಯಾವುದೇ ಧಾರ್ಮಿಕ ವ್ಯಕ್ತಿಗಳನ್ನು ಅವಮಾನಿಸುವುದನ್ನು ಪಕ್ಷ ಬಲವಾಗಿ ಖಂಡಿಸುತ್ತದೆ’ ಎಂದು ಬಿಜೆಪಿ ರವಿವಾರ ಹೇಳಿಕೊಂಡಿದೆ.
“ಭಾರತದ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಪ್ರತಿಯೊಂದು ಧರ್ಮವು ಅರಳಿತು ಹಾಗೂ ಪ್ರವರ್ಧಮಾನಕ್ಕೆ ಬಂದಿದೆ. ಭಾರತೀಯ ಜನತಾ ಪಕ್ಷವು ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ. ಯಾವುದೇ ಧರ್ಮದ ಯಾವುದೇ ಧಾರ್ಮಿಕ ವ್ಯಕ್ತಿಗಳನ್ನು ಅವಮಾನಿಸುವುದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ” ಎಂದು ಅದು ಹೇಳಿಕೆಯೊಂದರಲ್ಲಿ ತಿಳಿಸಿದೆ.
ವಿಶ್ವದಾದ್ಯಂತ ಹಲವಾರು ಪ್ರಮುಖ ಮಾಧ್ಯಮಗಳು ಹಾಗೂ ಹಲವಾರು ಪ್ರಮುಖ ವ್ಯಕ್ತಿಗಳು ಹೇಳಿಕೆಯನ್ನು ಖಂಡಿಸಿದ್ದು ಮಾತ್ರವಲ್ಲದೇ ವಕ್ತಾರೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಜೊತೆಗೆ ಭಾರತದೊಂದಿಗೆ ಗಲ್ಫ್ ರಾಷ್ಟ್ರಗಳು ಸಂಬಂಧ ಕಡಿದುಕೊಳ್ಳಬೇಕು ಹಾಗೂ ಭಾರತೀಯ ವಸ್ತುಗಳನ್ನು ಬಹಿಷ್ಕರಿಸಬೇಕಾಗಿಯೂ ಹಲವರು ಪೋಸ್ಟ್ ಗಳನ್ನು ಮಾಡಿದ್ದಾರೆ.
ಪ್ರಧಾನಿ ಮೋದಿ ತಮ್ಮ ಮಿತಿಯನ್ನು ಮೀರುತ್ತಿದ್ದು, ದೇಶದಲ್ಲಿ ಅಲ್ಪಸಂಖ್ಯಾತರ ಶೋಷಣೆ ಹೆಚ್ಚಾಗುತ್ತಿದೆ ಎಂಬುವುದನ್ನು ಹಲವರು ಬೆಟ್ಟು ಮಾಡಿದ್ದಾರೆ. ಈಗಾಗಲೇ ಹಲವಾರು ಸೂಪರ್ ಮಾರ್ಕೆಟ್ ಗಳು ಭಾರತೀಯ ವಸ್ತುಗಳನ್ನು ತೆಗೆದುಹಾಕಿದೆ ಎಂದೂ ವರದಿಯಾಗಿದೆ.