janadhvani

Kannada Online News Paper

ಮದೀನಾ ತಲುಪಿದ ಭಾರತದ ಹಜ್ ಯಾತ್ರಿಕರ ಮೊದಲ ತಂಡ

ಮದೀನಾ,ಜೂನ್.04: ಈ ವರ್ಷದ ಹಜ್ ಯಾತ್ರೆಗಾಗಿ ಭಾರತದಿಂದ ಮೊದಲ ತಂಡದ ಯಾತ್ರಿಕರು ಮದೀನಾಕ್ಕೆ ಆಗಮಿಸಿದ್ದಾರೆ. ನೆಡುಂಬಾಸ್ಸೆರಿಯಿಂದ ಬಂದ ವಿಮಾನವು 181 ಪುರುಷರು ಮತ್ತು 196 ಮಹಿಳೆಯರು ಸೇರಿದಂತೆ 377 ಯಾತ್ರಾರ್ಥಿಗಳೊಂದಿಗೆ ಮದೀನಾ ಮುಹಮ್ಮದ್ ಬಿನ್ ಅಬ್ದುಲ್ ಅಝಿಝ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತು.

ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಸುರಕ್ಷಿತೆಯ ದೃಷ್ಟಿಯಿಂದ ವಿದೇಶಿ ಹಜ್ಜ್ ಯಾತ್ರಾರ್ಥಿಗಳಿಗೆ ಅವಕಾಶ ನಿರಾಕರಿಸಲಾಗಿತ್ತು.

ಸೌದಿ ಕಾಲಮಾನ ಬೆಳಗ್ಗೆ 11.30ಕ್ಕೆ ವಿಮಾನ ಆಗಮಿಸಿತು. ಅರ್ಧ ಗಂಟೆಯಲ್ಲಿ ಪ್ರಕ್ರಿಯೆ ಮುಗಿಸಿ ಯಾತ್ರಾರ್ಥಿಗಳು ವಿಮಾನ ನಿಲ್ದಾಣದಿಂದ ತೆರಳಿದರು.ಭಾರತದ ಕಾನ್ಸುಲ್ ಜನರಲ್ ನೇತೃತ್ವದಲ್ಲಿ ಭಾರತೀಯ ಹಜ್ ಮಿಷನ್ ಅಧಿಕಾರಿಗಳು ಮತ್ತು ಸೌದಿ ಪಾಸ್‌ಪೋರ್ಟ್ ಇಲಾಖೆ ಅಧಿಕಾರಿಗಳು ಇವರನ್ನು ಸ್ವೀಕರಿಸಿದರು.

ವಿವಿಧ ಅನಿವಾಸಿ ಸಂಘಟನೆಗಳು ಸೇರಿ ಅದ್ದೂರಿಯ ಸ್ವಾಗತ ನೀಡಲಾಯಿತು. ಭಾರತದ ಮೊದಲ ಹಜ್ಜ್ ತಂಡವನ್ನು, ಕರ್ನಾಟಕದ ಅನಿವಾಸಿ ಸಂಘಟನೆ “ಕರ್ನಾಟಕ ಕಲ್ಚರಲ್ ಫೌಂಡೇಶನ್” (ಕೆ.ಸಿ.ಎಫ್) ಇದರ ಕಾರ್ಯಕರ್ತರು ಸಹ ಹಜ್ಜಾಜಿಗಳ ಸೇವೆಯಲ್ಲಿ ನಿರತರಾಗಿದ್ದರು.

ಯಾತ್ರಾರ್ಥಿಗಳು ಮದೀನಾ ಮುನವ್ವರದಲ್ಲಿ ಕೆಲವು ದಿನ ಇದ್ದು ಪ್ರಾರ್ಥನೆಗಳಲ್ಲಿ ತಲ್ಲೀನರಾಗುವರು. ಬಳಿಕ ಮಕ್ಕಾಕ್ಕೆ ತೆರಳಲಿದ್ದಾರೆ. ಅವರು ಹಜ್ ನಿರ್ವಹಿಸಿದ ನಂತರ ಮಕ್ಕಾದಿಂದ ಭಾರತಕ್ಕೆ ಮರಳುವರು.

ಮದೀನಾದಲ್ಲಿ ಪ್ರವಾದಿ ಮಸೀದಿ ಬಳಿ ಹಾಗೂ ಮಕ್ಕಾದಲ್ಲಿ, ಅಝೀಝಿಯಾದಲ್ಲಿ ಭಾರತೀಯ ಯಾತ್ರಾರ್ಥಿಗಳಿಗಾಗಿ ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ.