janadhvani

Kannada Online News Paper

ಶ್ರೀಲಂಕಾ ಶೈಲಿಯ ಆರ್ಥಿಕ ಬಿಕ್ಕಟ್ಟಿನ ಭೀತಿಯಲ್ಲಿ ಭಾರತ- ಉಚಿತ ಸ್ಕೀಂಗಳಿಗೆ ಬ್ರೇಕ್

ಸಾವಿರಾರು ಕೋಟಿ ನುಂಗಿ ಉದ್ಯಮಿಗಳು ಐಶಾರಾಮಿ ಜೀವನ ನಡೆಸುತ್ತಿದ್ದಾರೆ. ಅವರಿಂದ ವಸೂಲಿ ಮಾಡುವಲ್ಲಿ ಸರಕಾರ ವಿಫಲವಾಗಿದೆ.

ನವದೆಹಲಿ,ಏ.5: ಭಾರತದಲ್ಲಿ ದಿನನಿತ್ಯ ಬೆಲೆಯೇರಿಕೆ ಪರ್ವ ಮುಂದುವರಿದಿದೆ. ತೈಲ, ಅಡುಗೆ ಅನಿಲ, ವಿದ್ಯುತ್, ತರಕಾರಿ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗುತ್ತಿದ್ದು, ಶ್ರೀಲಂಕದ ಆರ್ಥಿಕ ಬಿಕ್ಕಟ್ಟಿನ ಶೈಲಿಯ ಬಿಕ್ಕಟ್ಟು ಭಾರತದಲ್ಲೂ ತಲೆದೋರುವ ಭೀತಿಗೆ ಕಾರಣವಾಗಿದೆ.

ಈ ಮಧ್ಯೆ ಉಚಿತ ಜನಪರ ಯೋಜನೆಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಶ್ರೀಲಂಕಾ ರೀತಿ ದೇಶದ ರಾಜ್ಯಗಳು ಆರ್ಥಿಕ ದುಸ್ಥಿತಿಗೆ ಈಡಾಗಬಹುದು ಎಂದು ಪ್ರಧಾನಿ ಮೋದಿ ಅವರಿಗೆ ಕೇಂದ್ರದ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಪ್ರಧಾನಿ ಮೋದಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ. ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಜನರಿಗೆ ನೀಡುವ ಉಚಿತ ಸ್ಕೀಂ ಗಳ ಅಳವಡಿಕೆಗೆ ಬಿಡಬಾರದು. ಇದರಿಂದ ದೇಶದ ಆರ್ಥಿಕತೆ ಶ್ರೀಲಂಕಾ ಮಾದರಿ ತಲುಪಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆದರೆ ನೋಟ್ ಬ್ಯಾನ್, ನಿರುದ್ಯೋಗ, ಖಾಸಗೀಕರಣ, ಕೋವಿಡ್ ನಿಂದ ದೇಶದ ಅರ್ಥವ್ಯವಸ್ಥೆ ಕುಸಿದಿದೆ. ಬೆಲೆಯೇರಿಕೆಯಿಂದ ಜನರಿಗೆ ಜೀವನ ಭಾರವಾಗುತ್ತಿದೆ. ಈ ಬಗ್ಗೆ ಸರಕಾರ ಗಮನಹರಿಸದೆ ಕೋಟ್ಯಾಂತರ ವೆಚ್ಚಮಾಡಿ ಸಾರ್ವಜನಿಕ ಹಣವನ್ನು ಅನಗತ್ಯ ಕೆಲಸಗಳಿಗೆ ದುರ್ಬಳಕೆ ಮಾಡುತ್ತಿದೆ.ಮನರಂಜನೆ ಸೇರಿ ವಿವಿಧ ಐಶಾರಾಮಿ ಕಾರ್ಯಕ್ರಮಗಳು, ರಾಜಕಾರಣಿಗಳ ವೈಭವದ ಜೀವನಕ್ಕೆ ಸರಕಾರದ ಬೊಕ್ಕಸದಿಂದ ಹಣ ಹೋಗುತ್ತಿದೆ.

ಸಾವಿರಾರು ಕೋಟಿ ನುಂಗಿ ಉದ್ಯಮಿಗಳು ಐಶಾರಾಮಿ ಜೀವನ ನಡೆಸುತ್ತಿದ್ದಾರೆ. ಅವರಿಂದ ವಸೂಲಿ ಮಾಡುವಲ್ಲಿ ಸರಕಾರ ವಿಫಲವಾಗಿದೆ. ಜಿಎಸ್ಟಿ ಬಡವನನ್ನು ಹಿಂಡುತ್ತಿದ್ದು ದುಬಾರಿ ಜೀವನದ ದುಸ್ಥಿತಿ ಎದುರಾಗಿದೆ. ದೇಶದ ಬಹುಪಾಲು ಸಂಪತ್ತು ಕೆಲವೇ ಕೆಲ ಉದ್ಯಮಿಗಳ ಕೈಯಲ್ಲಿ ಕ್ರೋಡೀಕರಣವಾಗಿದೆ. ಬಡ ಜನರು ಮತ್ತಷ್ಟು ಬಡತನಕ್ಕೆ ತಲ್ಲಲ್ಪಡುತ್ತಿದ್ದಾರೆ. ಇದ್ಯಾವುದರ ಬಗ್ಗೆಯೂ ಅಧಿಕಾರಿಗಳು ಸರಕಾರದ ಗಮನಕ್ಕೆ ತರದಿರುವುದು ಖೇಧಕರವಾಗಿದೆ.

ಇನ್ನೊಂದು ಕಡೆ, ಸಾಮರಸ್ಯದಿಂದ ಕಳೆಯುತ್ತಿದ್ದ ಜನರೆಡೆಯಲ್ಲಿ ಕೋಮು ವಿಷಬೀಜವನ್ನು ಬಿತ್ತಿ, ಹಲಾಲ್, ಜಟ್ಕಾ ಅಂತ ವ್ಯಾಪಾರ ವಹಿವಾಟುಗಳಿಗೆ ನಿರ್ಬಂಧ ವಿಧಿಸುವ ಸಂಘಪರಿವಾರದ ಷಡ್ಯಂತ್ರಕ್ಕೆ ಸರ್ಕಾರ ಕುಮ್ಮಕ್ಕು ನೀಡುತ್ತಿರುವುದು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಲಿದೆ.

ದೇಶದಲ್ಲಿ ಹಿಂದುತ್ವದ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳಿಂದ,ಅಶಾಂತಿ ತಲೆದೋರಿದೆ. ಇದು ವಿದೇಶೀ ಬಂಡವಾಳ ಹೂಡಿಕೆದಾರರನ್ನು ಇತರ ದೇಶಗಳಿಗೆ ಮುಖಮಾಡುವಂತೆ ಮಾಡಿದೆ. ಇದು ಭಾರತದ ಆರ್ಥಿಕ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸಲಿದೆ ಎಂಬುದನ್ನು ಸರ್ಕಾರ ಗಮನಿಸಬೇಕಾಗಿದೆ.

error: Content is protected !! Not allowed copy content from janadhvani.com