janadhvani

Kannada Online News Paper

ತಾಕತ್ತಿದ್ದರೆ ಮುಸ್ಲಿಂ ರಾಷ್ಟ್ರಗಳ ಜೊತೆಗಿನ ವ್ಯಾಪಾರ ವಹಿವಾಟನ್ನು ನಿಲ್ಲಿಸಲಿ- ಪ್ರಿಯಾಂಕ್ ಖರ್ಗೆ

ರಾಜ್ಯಕ್ಕೆ ಎರಡು ವರ್ಷದಿಂದ ಬಂಡವಾಳ ಹರಿದು ಬರುತ್ತಿಲ್ಲ. ಹಿಜಾಬ್, ಹಿಂದೂ-ಮುಸ್ಲೀಂ, ಭಗವದ್ಗೀತೆ ಹೆಸರಿನಲ್ಲಿ ಸೌಹಾರ್ದತೆ ಕದಡಿದ್ದಾರೆ.

ಬೆಂಗಳೂರು, ಮಾ.26- ರಾಜ್ಯದಲ್ಲಿ ಕೋಮು ಆಧಾರಿತ ವ್ಯಾಪಾರ ವಹಿವಾಟುಗಳಿಗೆ ಕಡಿವಾಣ ಹಾಕುತ್ತಿರುವವರು ತಾಕತ್ತಿದ್ದರೆ ಮೇಲ್ಮಟ್ಟದಲ್ಲಿ ಮುಸ್ಲಿಂ ರಾಷ್ಟ್ರಗಳ ಜೊತೆಗಿನ ವ್ಯಾಪಾರ ವಹಿವಾಟನ್ನು ನಿಲ್ಲಿಸಲಿ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದವರು ಕರ್ನಾಟಕದಂತಾಗ ಬೇಕು ಎಂದು ಕೊಳ್ಳುತ್ತಿದ್ದಾರೆ. ಆದರೆ ಇವರು ಉತ್ತರ ಪ್ರದೇಶದ ಮಾದರಿ ಮಾಡಲು ಹೊರಟಿದ್ದಾರೆ. ಅಲ್ಲಿ ಅಭಿವೃದ್ಧಿಯಾಗಿದ್ದರೆ ಉತ್ತರ ಪ್ರದೇಶದವರು ಇಲ್ಲಿ ಬಂದು ಯಾಕೆ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ರಾಜ್ಯಕ್ಕೆ ಎರಡು ವರ್ಷದಿಂದ ಬಂಡವಾಳ ಹರಿದು ಬರುತ್ತಿಲ್ಲ. ಹಿಜಾಬ್, ಹಿಂದೂ-ಮುಸ್ಲೀಂ, ಭಗವದ್ಗೀತೆ ಹೆಸರಿನಲ್ಲಿ ಸೌಹಾರ್ದತೆ ಕದಡಿದ್ದಾರೆ. ಹೀಗಾಗಿ ಬಂಡವಾಳ ಹೂಡಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ದೇಶದಲ್ಲಿ 8.5 ಲಕ್ಷ ಜನ ಭಾರತದಲ್ಲಿ ಒಳ್ಳೆಯ ವಾತಾವರಣ ಇಲ್ಲ ಎಂದು ನಮ್ಮ ದೇಶದ ನಾಗರಿಕತೆಯನ್ನೇ ತೊರೆದಿದ್ದಾರೆ.

ದೇಶ ಬಿಟ್ಟು ಬೇರೆ ದೇಶಗಳಿಗೆ ಹೋಗಿದ್ದಾರೆ. ಇವರು ಜಾತಿ, ಧರ್ಮದ ರಾಜಕಾರಣ ಮಾಡುತ್ತಿದ್ದಾರೆ. ಹಸಿವಿಗೆ ಯಾವ ಜಾತಿ, ಧರ್ಮ ಇದೆ ಎಂದು ಪ್ರಶ್ನಿಸಿದರು.ಇವರು ಕೆಳ ಹಂತದಲ್ಲಿ ಧರ್ಮಾಧಾರಿತ ವ್ಯಾಪಾರಗಳಿಗೆ ಕಡಿವಾಣ ಹಾಕುತ್ತಾರೆ. ತಾಕತ್ತಿದ್ದರೆ ಮೇಲ್ಮಟ್ಟದಲ್ಲೂ ನಿರ್ಬಂಧ ಜಾರಿ ಮಾಡಲಿ. ಇಸ್ಲಾಂ ರಾಷ್ಟ್ರಗಳ ಜೊತೆ ವ್ಯಾಪಾರ ಮಾಡುವುದಿಲ್ಲ ಎಂದು ಘೋಷಣೆ ಮಾಡಲಿ.

ಭಾರತ ದುಬೈ ಜೊತೆ 26.5 ಬಿಲಿಯನ್ ಡಾಲರ್, ಕತಾರ್ ಜೊತೆ 11.5 ಬಿಲಿಯನ್ ಡಾಲರ್, ಜೋರ್ಡಾನ್ ಜೊತೆ 1.7 ಬಿಲಿಯನ್ ಡಾಲರ್ ಹಾಗೂ ಮಲೆಶಿಯಾ ಸೇರಿ ಹಲವು ರಾಷ್ಟ್ರಗಳ ಜೊತೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಇವೆಲ್ಲವೂ ಏನು ಹಿಂದೂ ರಾಷ್ಟ್ರಗಳೇ? ಎಲ್ಲವೂ ಮುಸ್ಲಿಂ ರಾಷ್ಟ್ರಗಳು. ಇವುಗಳ ಜೊತೆ ವ್ಯಾಪಾರ ಮುಂದುವರೆಸುತ್ತಿರುವುದೇಕೆ ? ಪೆಟ್ರೋಲ್, ಡಿಸೇಲ್ ಎಲ್ಲಿಂದ ಆಮದು ಮಾಡಿಕೊಳ್ಳುತ್ತಿರಾ ಎಂದು ಪ್ರಶ್ನಿಸಿದರು.

error: Content is protected !! Not allowed copy content from janadhvani.com