janadhvani

Kannada Online News Paper

ಉಕ್ರೇನ್ ದಾಳಿಯನ್ನು ತಕ್ಷಣ ನಿಲ್ಲಿಸಬೇಕು- ರಷ್ಯಾಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯ ಆದೇಶ

ರಷ್ಯಾದ ದಾಳಿಯ ನಂತರ ಉಕ್ರೇನ್ ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯದ ಮೊರೆ ಹೋಗಿತ್ತು

ಹೇಗ್, ಮಾರ್ಚ್ 17: ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯವಾದ ಅಂತಾರಾಷ್ಟ್ರೀಯ ನ್ಯಾಯಾಲಯವು ಉಕ್ರೇನ್ ದಾಳಿಯನ್ನು ತಕ್ಷಣವೇ ನಿಲ್ಲಿಸುವಂತೆ ರಷ್ಯಾಕ್ಕೆ ಆದೇಶಿಸಿದೆ. ರಷ್ಯಾದ ದಾಳಿಯ ನಂತರ ಉಕ್ರೇನ್ ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯದ ಮೊರೆ ಹೋಗಿತ್ತು. ವಾದ-ವಿವಾದ ಆಲಿಸಿದ ಬಳಿಕ ರಷ್ಯಾದ ಪರ ಮತ್ತು ವಿರುದ್ಧವಾಗಿ ಮತ ಚಲಾಯಿಸಲು ಐಸಿಜೆ ನಿರ್ಧರಿಸಿತು. ಆದರೆ ಅತ್ಯಂತ ಅಚ್ಚರಿಯ ವಿಷಯವೆಂದರೆ ಐಸಿಜೆಯಲ್ಲಿ ಭಾರತದ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಕೂಡ ರಷ್ಯಾದ ವಿರುದ್ಧ ಮತ ಚಲಾಯಿಸಿದ್ದಾರೆ. ಇದೇ ವೇಳೆ ಐಸಿಜೆ ಆದೇಶವನ್ನು ಅಮೆರಿಕ ಕೂಡ ಸ್ವಾಗತಿಸಿದೆ.

13 ನ್ಯಾಯಾಧೀಶರು ರಷ್ಯಾದ ವಿರುದ್ಧ ಮತ

13 ನ್ಯಾಯಾಧೀಶರು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ರಷ್ಯಾ ವಿರುದ್ಧ ಮತ ಚಲಾಯಿಸಿದರೆ, ಕೇವಲ ಇಬ್ಬರು ಮಾತ್ರ ಪರವಾಗಿ ಮತ ಹಾಕಿದರು. ಈ 13 ನ್ಯಾಯಾಧೀಶರಲ್ಲಿ ಭಾರತೀಯ ನ್ಯಾಯಮೂರ್ತಿ ಜಸ್ಟಿಸ್ ದಲ್ವೀರ್ ಭಂಡಾರಿ ಕೂಡ ಸೇರಿದ್ದಾರೆ. ಇಬ್ಬರು ನ್ಯಾಯಾಧೀಶರಾದ ಉಪಾಧ್ಯಕ್ಷ ಕಿರಿಲ್ ಗೆವೊರ್ಜಿಯನ್ (ರಷ್ಯಾ) ಮತ್ತು ನ್ಯಾಯಾಧೀಶ ಸ್ಯೂ ಹ್ಯಾಂಕಿನ್ (ಚೀನಾ) ರಷ್ಯಾದ ಪರವಾಗಿ ಮತ ಚಲಾಯಿಸಿದರು.

ಭಾರತದ ನ್ಯಾಯಾಧೀಶ ದಲ್ವೀರ್ ಭಂಡಾರಿ ಯಾರು?

ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಅವರು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ತಮ್ಮ ಎರಡನೇ ಅವಧಿಯನ್ನು ಪೂರ್ಣಗೊಳಿಸುತ್ತಿದ್ದಾರೆ. ಅವರು 2012ರಲ್ಲಿ ಮೊದಲ ಅವಧಿಗೆ ಆಯ್ಕೆಯಾದರು, ಬಳಿಕ ಅದು 2018 ರವರೆಗೆ ಮುಂದುವರೆಯಿತು. ದಲ್ವೀರ್ ಅವರು ಭಾರತದಿಂದ ಮರು-ನಾಮನಿರ್ದೇಶನಗೊಂಡು, ಯುಕೆ ನಾಮನಿರ್ದೇಶಿತ ನ್ಯಾಯಮೂರ್ತಿ ಗ್ರೀನ್‌ವುಡ್ ಅವರನ್ನು ಸೋಲಿಸುವ ಮೂಲಕ ICJ ನಲ್ಲಿ ಮತ್ತೊಂದು ಅವಧಿಯನ್ನು ಗೆದ್ದುಕೊಂಡಿದ್ದಾರೆ.

ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶದ ನಂತರ, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾವನ್ನು ತಕ್ಷಣವೇ ಐಸಿಜೆ ಆದೇಶವನ್ನು ಪಾಸಿಸುವಂತೆ ಕೇಳಿಕೊಂಡರು. ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ರಷ್ಯಾ ವಿರುದ್ಧದ ಪ್ರಕರಣದಲ್ಲಿ ಉಕ್ರೇನ್ ಸಂಪೂರ್ಣ ಜಯ ಸಾಧಿಸಿದಂತಾಗಿದೆ. ಆದೇಶವನ್ನು ನಿರ್ಲಕ್ಷಿಸುವುದು ರಷ್ಯಾವನ್ನು ಮತ್ತಷ್ಟು ಪ್ರತ್ಯೇಕಿಸುತ್ತದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ರಷ್ಯಾ ಆಕ್ರಮಣವನ್ನು ತಕ್ಷಣವೇ ನಿಲ್ಲಿಸಲು ICJ ಆದೇಶಿಸಿದೆ, ಇದನ್ನು ರಷ್ಯಾ ಅನುಸರಿಸಬೇಕು. ಈ ಆದೇಶವು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಬದ್ಧವಾಗಿದೆ ಎಂದು ಐಸಿಜೆ ಹೇಳಿದೆ.

error: Content is protected !! Not allowed copy content from janadhvani.com