janadhvani

Kannada Online News Paper

ಹಿಜಾಬ್: ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ- ಹೋಳಿ ಹಬ್ಬ ಬಳಿಕ ವಿಚಾರಣೆ

ಹೋಳಿ ಹಬ್ಬದ ಬಳಿಕ ವಿಚಾರಣೆಗೆ ದಿನಾಂಕ ನಿಗಧಿ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ನವದೆಹಲಿ, ಮಾ. 16: ಶಾಲೆಗಳಲ್ಲಿ ಹಿಜಾಬ್ ಧರಿಸುವ ವಿಷಯಕ್ಕೆ ಸಂಬಂಧಿಸಿದಂತೆ ನಿನ್ನೆ (ಮಾರ್ಚ್ 15ರಂದು) ಕರ್ನಾಟಕ ಹೈಕೋರ್ಟ್  ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ  ಮೇಲ್ಮನವಿ ಸಲ್ಲಿಸಲಾಗಿದೆ‌. ಈ ಬಗ್ಗೆ ತುರ್ತಾಗಿ ವಿಚಾರಣೆ ನಡೆಸಬೇಕೆಂದು ಕೂಡ ಮನವಿ ಮಾಡಿಕೊಳ್ಳಲಾಗಿದೆ. ಆದರೆ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿಲ್ಲ. ಹೋಳಿ ಹಬ್ಬದ ಬಳಿಕ ವಿಚಾರಣೆಗೆ ದಿನಾಂಕ ನಿಗಧಿ ಮಾಡಲಾಗುವುದು ಎಂದು ತಿಳಿಸಿದೆ. ನಿನ್ನೆ ಹೈಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ನಿಬಾ ನಾಜ್ ಎಂಬ ವಿದ್ಯಾರ್ಥಿನಿ ಸುಪ್ರೀಂ ಕೋರ್ಟಿನಲ್ಲಿ ವಕೀಲ ಅನಸ್ ತನ್ವೀರ್ ಮೂಲಕ ಅರ್ಜಿ ಸಲ್ಲಿಕೆ ಮಾಡಿದ್ದರು.

ಉಡುಪಿಯಲ್ಲಿ ಪ್ರತಿಭಟನೆ ಮಾಡಿದ ಆರು ವಿದ್ಯಾರ್ಥಿನಿಯರ ಪರ ಹೈಕೋರ್ಟಿನಲ್ಲಿ ವಾದ ಮಂಡಿಸಿದ್ದ ವಕೀಲರಾದ ಸಂಜಯ್ ಹೆಗಡೆ ಮತ್ತು ದೇವದತ್ ಕಾಮತ್ ಅವರು ಇಂದು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದರು. ಅರ್ಜಿ ಸಲ್ಲಿಕೆಯ ಬಳಿಕ ಓಪನ್ ಕೋರ್ಟಿನಲ್ಲಿ ಮೆನ್ಷನ್ ಮಾಡಿ ತುರ್ತಾಗಿ ವಿಚಾರಣೆ ನಡೆಸಬೇಕೆಂದು ಮನವಿ ಮಾಡಿಕೊಂಡರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಪ್ರೀಂ ಕೋರ್ಟ್ ಹೋಳಿ ಹಬ್ಬದ ಬಳಿಕ ವಿಚಾರಣೆಗೆ ದಿನಾಂಕ ನಿಗಧಿ ಮಾಡಲಾಗುವುದು ಎಂದು ಹೇಳಿತು. ಆಗ ವಕೀಲ ಸಂಜಯ್ ಹೆಗಡೆ ಸೋಮವಾರವಾದರೂ ವಿಚಾರಣೆ ನಡೆಸಿ ಎಂದು ಕೇಳಿಕೊಂಡರು. ಸುಪ್ರೀಂ ಕೋರ್ಟ್ ಅದಕ್ಕೂ ಮಾನ್ಯ ಮಾಡಲಿಲ್ಲ.

ಇತರರಿಂದಲೂ ಪ್ರತ್ಯೇಕ ಅರ್ಜಿಗಳ ಸಲ್ಲಿಕೆ ಸಾಧ್ಯತೆ

ಅಖಿಲ ಭಾರತ ಯುವ ಕಾಂಗ್ರೆಸ್ ಈ ಹಿಂದೆಯೇ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು. ಈಗ ರಾಜ್ಯ ಹೈಕೋರ್ಟ್ ತೀರ್ಪು ಹೊರಬಿದ್ದಿರುವ ಹಿನ್ನಲೆಯಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಇದೇ ರೀತಿ ಹಿಂದೆ ಅರ್ಜಿ ಸಲ್ಲಿಸಿದ್ದ ರಾಜ್ಯದ ವಕ್ಫ್ ಬೋರ್ಡ್, ಡಾ. ಜೆ ಹಳ್ಳಿ ಫೆಡರೇಷನ್ ಆಫ್ ಮಸೀದ್, ಮದ್ರಾಸ್ ಅ್ಯಂಡ್ ವಕ್ಫ್ ಇನ್ಸ್ಟಿಟ್ಯೂಟಿಷನ್ ಗಳು ಕೂಡ ಪ್ರತ್ಯೇಕವಾದ ಅರ್ಜಿಗಳನ್ನು ಸಲ್ಲಿಸುವ ಸಾಧ್ಯತೆಗಳಿವೆ.