janadhvani

Kannada Online News Paper

ಪಿಯು ಕಾಲೇಜ್ ವಿದ್ಯಾರ್ಥಿನಿಗಳ ಹಿಜಾಬ್- ಹೈಕೋರ್ಟ್ ತೀರ್ಪು ನಾಳೆ ಪ್ರಕಟ

ಬೆಂಗಳೂರು: ರಾಜ್ಯದ ಕೆಲವು ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಗಳಿಗೆ ಶಿರವಸ್ತ್ರ (ಹಿಜಾಬ್) ವನ್ನು ನಿರ್ಬಂಧಿಸಿದ್ದ ಕ್ರಮವನ್ನು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಸಂಹಿತೆ ಜಾರಿಗೆ ಸರಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಗಳ ವಿಚಾರಣೆ ಈಗಾಗಲೇ ಹೈಕೋಟ್‌ರ್ನಲ್ಲಿ ಪೂರ್ಣಗೊಂಡಿದ್ದು, ನಾಳೆ ಬೆಳಗ್ಗೆ 10.30ಕ್ಕೆ ಹೈಕೋರ್ಟ್ ತೀರ್ಪು ಪ್ರಕಟಿಸಲಿದೆ.

ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ತ್ರಿಸದಸ್ಯ ನ್ಯಾಯಪೀಠದಲ್ಲಿ ಉಡುಪಿಯ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರೇಷಮ್ ಹಾಗೂ ಇತರೆ ವಿದ್ಯಾರ್ಥಿನಿಯರ ಪೋಷಕರು ಸಲ್ಲಿಸಿದ್ದ 9 ರಿಟ್ ಅರ್ಜಿಗಳು ಹಾಗೂ 20ಕ್ಕೂ ಹೆಚ್ಚು ಮಧ್ಯಂತರ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಎಲ್ಲ ಅರ್ಜಿದಾರರ ಪರ ವಕೀಲರ ಹಾಗೂ ಸರಕಾರಿ ಪರ ವಕೀಲರ ವಾದವನ್ನು ಆಲಿಸಿದ್ದ ಹೈಕೋರ್ಟ್ ತೀರ್ಪುನ್ನು ಕಾಯ್ದಿರಿಸಿತ್ತು.

ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ರವರ ಪೂರ್ಣ ಪೀಠ ತೀರ್ಪು ನೀಡಲಿದೆ.

ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅವಶ್ಯಕ ಧಾರ್ಮಿಕ ಆಚರಣೆಯ ಭಾಗವೇ.? ಮತ್ತು ಈ ವಿಚಾರದಲ್ಲಿ ಸರ್ಕಾರ ಬಯಸಿದರೆ ಮಧ್ಯಪ್ರವೇಶ ಮಾಡಬಹುದೇ? ಎನ್ನುವುದು ಕೋರ್ಟ್ ಮುಂದೆ ಇರುವ ಪ್ರಮುಖ ಪ್ರಶ್ನೆಗಳಾಗಿವೆ. ಜತೆಗೆ ಹಿಜಾಬ್ ಧರಿಸುವುದನ್ನು ಸಂವಿಧಾನದ 19 (1) (a) ಪರಿಚ್ಛೇದದ ಅಡಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಪರಿಗಣಿಸಬೇಕೇ ಅಥವಾ 19 (2) ರ ಅಡಿ ನಿರ್ಬಂಧಗಳಿಗೆ ಒಳಪಡಿಸಬಹುದೇ ಎಂಬುದನ್ನು ಕೂಡ ನಿರ್ಧರಿಸಬೇಕಿದೆ.

ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದ ಬಳಿಕ ಕರ್ನಾಟಕದಾದ್ಯಂತ ಹಬ್ಬಿ ಇದೀಗ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಸದ್ದು ಮಾಡಿದೆ. ಹಿಜಾಬ್ ವಿವಾದ ಹಿನ್ನೆಲೆ ಹೈಕೋರ್ಟ್ನಲ್ಲಿ 11 ದಿನಗಳ ಕಾಲ ಚರ್ಚೆ ನಡೆಸಿ ತೀರ್ಪು ಕಾಯ್ದಿರಿಸಲಾಗಿತ್ತು. ಸದ್ಯ ನಾಳೆ ಬೆಳಗ್ಗೆ 10.30ಕ್ಕೆ ಹೈಕೋರ್ಟ್ ಪೂರ್ಣ ಪೀಠದಿಂದ ತೀರ್ಪು ಹೊರ ಬೀಳಲಿದೆ.