ರಿಯಾದ್: ಸೌದಿ ಅರೇಬಿಯಾದಲ್ಲಿ ಕೊಲೆಗಾರರು ಮತ್ತು ಉಗ್ರಗಾಮಿ ಗುಂಪುಗಳಿಗೆ ಸೇರಿದ ಅಪರಾಧಗಳಿಗೆ ಶಿಕ್ಷೆಗೊಳಗಾದ 81 ಜನರನ್ನು ಶನವಾರ ಗಲ್ಲಿಗೇರಿಸಲಾಗಿದೆ ಎಂದು ಸೌದಿ ಅರೇಬಿಯಾದ ಅಧಿಕೃತ ಮಾಧ್ಯಮ (ಎಸ್ಪಿಎ) ವರದಿ ಮಾಡಿದೆ. ಇದು ತನ್ನ ಆಧುನಿಕ ಇತಿಹಾಸದಲ್ಲಿ ಒಂದೇ ದಿನ ನಡೆಸಲಾದ ಅತಿದೊಡ್ಡ ಸಾಮೂಹಿಕ ಮರಣದಂಡನೆಯಾಗಿದೆ.
ಈ ಹಿಂದೆ 1979ರಲ್ಲಿ ಮಕ್ಕಾದ ಮಸೀದಿಯ ಮೇಲೆ ದಾಳಿ ಮಾಡಿದ್ದ ಪ್ರಕರಣದಲ್ಲಿ 63 ಉಗ್ರರನ್ನು 1980ರ ಒಂದು ದಿನದಲ್ಲಿ ಮರಣದಂಡನೆಗೆ ಗುರಿಪಡಿಸಲಾಗಿತ್ತು. ಅದು ಸೌದಿ ಅರೇಬಿಯಾದ ದಿನವೊಂದರ ದೊಡ್ಡ ಸಂಖ್ಯೆಯ ಮರಣದಂಡನೆ ಎಂದು ದಾಖಲೆಯಾಗಿತ್ತು.
“ಇಸ್ಲಾಮಿಕ್ ಸ್ಟೇಟ್, ಅಲ್-ಖೈದಾ, ಹೂತಿ ಮತ್ತು ಇತರ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದವರು, ಸರ್ಕಾರಿ ಸಿಬ್ಬಂದಿಯನ್ನು ಹಾಗೂ ಪ್ರಮುಖ ಆರ್ಥಿಕ ಸ್ಥಳಗಳನ್ನು ಗುರಿ ಮಾಡಿಸಿದವರು, ಕಾನೂನು ಜಾರಿ ಅಧಿಕಾರಿಗಳನ್ನು ಕೊಲೆ ಮಾಡಿ ಅವರ ದೇಹಗಳನ್ನು ಛಿದ್ರಗೊಳಿಸಿದ ಮತ್ತು ಪೊಲೀಸ್ ವಾಹನಗಳನ್ನು ಗುರಿಯಾಗಿಸಿ ನೆಲ ಬಾಂಬುಗಳನ್ನು ಅಳವಡಿಸಿದ ಪ್ರಕರಣಗಳ ಅಪರಾಧಿಗಳನ್ನು ಇದು ಒಳಗೊಂಡಿದೆ” ಎಂದು ಎಸ್ಪಿಎ ತಿಳಿಸಿದೆ.
ಜತೆಗೆ ಅಪಹರಣ, ಚಿತ್ರಹಿಂಸೆ, ಅತ್ಯಾಚಾರ, ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮತ್ತು ಅರಮನೆಗೆ ಬಾಂಬ್ಗಳನ್ನು ಎಸೆದಂತಹ ಅಪರಾಧ ಪ್ರಕರಣಗಳ ತಪ್ಪಿತಸ್ಥರನ್ನು ಕೂಡ ಮರಣದಂಡನೆಗೆ ಒಳಪಡಿಸಲಾಗಿದೆ ಎಂದು ಹೇಳಿದೆ.
ಶಿಕ್ಷೆಗೆ ಒಳಗಾದವರಲ್ಲಿ 73 ಸೌದಿ ಪ್ರಜೆಗಳು, ಏಳು ಮಂದಿ ಯೆಮನ್ ಪ್ರಜೆಗಳು ಹಾಗೂ ಒಬ್ಬ ಸಿರಿಯಾ ಪ್ರಜೆ ಸೇರಿದ್ದಾರೆ. ಶಿಕ್ಷೆಗೆ ಒಳಗಾದ ಎಲ್ಲ ಅಪರಾಧಿಗಳನ್ನೂ ಸೌದಿಯ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ಪ್ರತಿ ಆರೋಪಿಗಳಿಗೂ ಮೂರು ಪ್ರತ್ಯೇಕ ಹಂತಗಳಲ್ಲಿ ವಿಚಾರಣೆ ನಡೆದಿದ್ದು, 13 ನ್ಯಾಯಾಧೀಶರು ವಿಚಾರಣೆಯನ್ನು ನಡೆಸಿದ್ದಾರೆ.
“ಭಯೋತ್ಪಾದನೆ ಹಾಗೂ ಸ್ಥಿರತೆಗೆ ಬೆದರಿಕೆ ಒಡ್ಡುವ ಉಗ್ರವಾದಿ ಸಿದ್ಧಾಂತಗಳ ವಿರುದ್ಧ ರಾಜಮನೆತನವು ಕಠಿಣ ಹಾಗೂ ಮುಲಾಜಿಲ್ಲದ ನಿಲುವು ತೆಗೆದುಕೊಳ್ಳುವುದನ್ನು ಮುಂದುವರಿಸಲಿದೆ” ಎಂದು ವರದಿಯಲ್ಲಿ ಹೇಳಿದೆ
ಸೌದಿಯಲ್ಲಿ ಮರಣದಂಡನೆ ಶಿಕ್ಷೆ ವಿರಳವೇನಲ್ಲ. ಮುಗ್ಧ ಜನರು, ಮಹಿಳೆಯರ ಸಾವಿಗೆ ಕಾರಣರಾಗಿದ್ದವರು ಈ ಬಾರಿ ದಂಡನೆಗೊಳಗಾದವರು ಎಂಬ ಪ್ರಕಟಣೆ ರಾಜಾಡಳಿತದಿಂದ ಹೊರಬಿದ್ದಿದೆ. ಮರಣದಂಡನೆಗೆ ಒಳಗಾದವರಲ್ಲಿ 73 ಸೌದಿಗಳು, 7 ಯೆಮನಿಯರು, ಒಬ್ಬ ಸಿರಿಯನ್ ಇದ್ದಾರೆ.
ಮರಣದಂಡನೆಗೆ ಒಳಗಾದವರೆಲ್ಲರೂ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸಲು ಮತ್ತು ಶಸ್ತ್ರಾಸ್ತ್ರಗಳನ್ನು ದೇಶದೊಳಗೆ ಕಳ್ಳಸಾಗಣೆ ಮಾಡಲು ಸಂಚು ರೂಪಿಸುತ್ತಿದ್ದರು ಎಂದು ಅದು ವರದಿ ಮಾಡಿದೆ.







