janadhvani

Kannada Online News Paper

ಉತ್ತರ ಪ್ರದೇಶ ಚುನಾವಣೆ: ಜೈಲಿನಲ್ಲಿರುವ ಅಜಂ ಖಾನ್‌ ಭಾರೀ ಮುನ್ನಡೆ

ಮಾಜಿ ಸಚಿವ ಅಜಂ ಖಾನ್ ಮತ್ತು ಅವರ ಪುತ್ರ ಅಬ್ದುಲ್ಲಾ ತಮ್ಮ ತಮ್ಮ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮತ ಏಣಿಕೆ ನಡೆಯುತ್ತಿದ್ದು, ರಾಮ್‌ಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಮಾಜಿ ಸಚಿವ ಅಜಂ ಖಾನ್ ಮತ್ತು ಅವರ ಪುತ್ರ ಅಬ್ದುಲ್ಲಾ ತಮ್ಮ ತಮ್ಮ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಪ್ರಸ್ತುತ ಸೀತಾಪುರ ಜೈಲಿನಲ್ಲಿರುವ ಅಜಂ ಖಾನ್ ಅವರು ಯುಪಿಯ ರಾಮ್‌ಪುರ ವಿಧಾನಸಭಾ ಕ್ಷೇತ್ರದಿಂದ ಈವರೆಗೆ 41608 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಆಕಾಶ್ ಸಕ್ಸೆನಾ ವಿರುದ್ದ ಸುಮಾರು 36 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಬಿಜೆಪಿ, ಆರೆಸ್ಸೆಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಸಮಾಜವಾದಿ ಪಕ್ಷದ ಹಿರಿಯ ನಾಯಕ ಮತ್ತು ಸಂಸದ ಅಜಂ ಖಾನ್‌ಗೆ ಅಲಹಾಬಾದ್ ಹೈಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ. ಆದರೂ ಅವರ ವಿರುದ್ಧ ದಾಖಲಾಗಿರುವ ಇನ್ನೆರಡು ಪ್ರಕರಣಗಳ ವಿಚಾರಣೆ ಬಾಕಿಯರುವ ಕಾರಣ ಅವರು ಜೈಲಿನಲ್ಲಿಯೇ ಇರಲಿದ್ದಾರೆ.

ಅಜಂ ಖಾನ್ ಪುತ್ರ ಮೊಹಮ್ಮದ್ ಅಬ್ದುಲ್ಲಾ ಅಜಂ ಖಾನ್‌ ಕೂಡ ಸುವಾರ್ ಸೀಟಿನಲ್ಲಿ ಮುನ್ನಡೆಯಲ್ಲಿದ್ದಾರೆ. ಸಮೀಪದ ಅಪ್ನಾ ದಳದ ಅಭ್ಯರ್ಥಿಗಿಂತ 22 ಸಾವಿರ ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಎಸ್‌ಪಿ ಸೇರಿದ್ದ ಸಮಾಜವಾದಿ ಪಕ್ಷದ ಮತ್ತೊಬ್ಬ ಅಭ್ಯರ್ಥಿ ಸ್ವಾಮಿ ಪ್ರಸಾದ್ ಮೌರ್ಯ ಅವರು ಫಾಜಿಲ್ ನಗರ ಕ್ಷೇತ್ರದಲ್ಲಿ ಹಿನ್ನಡೆಯಲ್ಲಿದ್ದಾರೆ.

ಜನಸಂಖ್ಯೆಯ ದೃಷ್ಟಿಯಿಂದ, ದೇಶದ ಅತಿದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶ ಮತ್ತೊಂದು ಬಾರಿಗೆ ಬಿಜೆಪಿಗೆ ದಕ್ಕಲಿದ್ದು, ಇದುವರೆಗೆ ರಾಜ್ಯದ 403 ಸ್ಥಾನಗಳಲ್ಲಿ ಬಿಜೆಪಿ 260ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದು ಬಹುಮತಕ್ಕೆ ಬೇಕಾದ 202 ಸ್ಥಾನಗಳಿಗಿಂತ ಹೆಚ್ಚು. ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ 125 ಸ್ಥಾನಗಳಲ್ಲಿ ಮುಂದಿದೆ. ಬಿಎಸ್‌ಪಿ ಏಳು ಮತ್ತು ಕಾಂಗ್ರೆಸ್ ಐದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

error: Content is protected !! Not allowed copy content from janadhvani.com