ರಿಯಾದ್: ಮಹಿಳೆಯರು ಒಂಟಿಯಾಗಿ ಪ್ರಯಾಣಿಸಲು ವಿಶ್ವದ ಸುರಕ್ಷಿತ ನಗರಗಳಲ್ಲಿ ಸೌದಿ ಅರೇಬಿಯಾದ ಪುಣ್ಯ ನಗರ ಮದೀನಾ ಮೊದಲನೇ ಸ್ಥಾನ ಪಡೆದಿದೆ.ಯುರೋಪ್ ಮೂಲದ ಸಂಸ್ಥೆಯೊಂದು ಈ ಸಮೀಕ್ಷೆಯನ್ನು ನಡೆಸಿದೆ. ಯುನೈಟೆಡ್ ಕಿಂಗ್‌ಡಂ ಮೂಲದ InsureMyTrip ಎಂಬ ಟ್ರಾವೆಲ್ ಇನ್ಸುರೆನ್ಸ್ ಕಂಪೆನಿಯು ಈ ಸಮೀಕ್ಷೆ ನಡೆಸಿದ್ದು, ಮದೀನಾ ನಗರವು ಒಂಟಿ ಮಹಿಳೆಯರ ಪ್ರಯಾಣಕ್ಕೆ ಸಂಬಂಧಿಸಿದ ವಿವಿಧ ಮಾನದಂಡಗಳಲ್ಲಿ 10/10 ಅಂಕ ಪಡೆದು ಮೊದಲ ಸ್ಥಾನವನ್ನು ಪಡೆದಿದೆ.
InsureMyTrip ಸೈಟ್ ಪ್ರಕಾರ, 84 ಪ್ರತಿಶತದಷ್ಟು ಒಂಟಿ ಪ್ರಯಾಣಿಕರು ಮಹಿಳೆಯರು. ಅವರ ಅಗತ್ಯಗಳನ್ನು ಪೂರೈಸಲು, ಹಾಗೂ ಇವರಿಗೆ ಸುರಕ್ಷಿತ ಸ್ಥಳಗಳನ್ನು ಕಂಡುಹಿಡಿಯಲು ಅಧ್ಯಯನವನ್ನು ನಡೆಸಲಾಗಿದೆ. ರಾತ್ರಿಯಲ್ಲಿ ಏಕಾಂಗಿಯಾಗಿ ನಡೆಯಲು ಸುರಕ್ಷಿತ ಭಾವನೆಯ ನೀಡುವ ಆಧಾರದ ಮೇಲೆ ಹಾಗೂ ಲಿಂಗಾಧರಿತ ದಾಳಿಗಳ ಅನುಪಸ್ಥಿತಿಯಿಂದಾಗಿ ಮದೀನಾವು ಅತೀ ಹೆಚ್ಚು ಅಂಕ ಪಡೆದಿದೆ.
InsureMyTrip ಅಧ್ಯಯನದ ಪ್ರಕಾರ, ಥೈಲ್ಯಾಂಡ್‌ನ ಚಿಯಾಂಗ್ ಮಾಯ್ ಒಟ್ಟಾರೆ 9.06/10 ಅಂಕಗಳೊಂದಿಗೆ ಎರಡನೇ ಸುರಕ್ಷಿತ ನಗರವಾಗಿದೆ. ರಾತ್ರಿ ವೇಳೆ ಒಂಟಿಯಾಗಿ ನಡೆಯಲು ಸುರಕ್ಷಿತ ಭಾವ ನೀಡುವ ಸೂಚ್ಯಂಕದಲ್ಲಿ 9.43/10 ಅಂಕಗಳೊಂದಿಗೆ ದುಬೈ ಮೂರನೇ ಸ್ಥಾನ ಪಡೆದಿದೆ. ಇದಕ್ಕೆ ವ್ಯತಿರಿಕ್ತವಾಗಿ, ಜೋಹಾನ್ಸ್‌ಬರ್ಗ್, ಕೌಲಾಲಂಪುರ್ ಮತ್ತು ದೆಹಲಿಗಳು ಮಹಿಳಾ ಏಕಾಂಗಿ ಪ್ರಯಾಣಿಕರಿಗೆ ಅತ್ಯಂತ ಕಡಿಮೆ ಸುರಕ್ಷಿತ ನಗರಗಳಾಗಿ ಸ್ಥಾನ ಪಡೆದಿವೆ.
ಭಾರತದ ರಾಜಧಾನಿ ದೆಹಲಿ ಒಂಟಿ ಪ್ರಯಾಣಿಕ ಮಹಿಳೆಯರಿಗೆ ಅತಿ ಕಡಿಮೆ ಸುರಕ್ಚಿತ ನಗರವಾಗಿದ್ದು, ರಾತ್ರಿಯಲ್ಲಿ ಏಕಾಂಗಿಯಾಗಿ ನಡೆಯಲು ಸುರಕ್ಷಿತ ಭಾವನೆಯ ನೀಡುವ ಸೂಚ್ಯಂಕದಲ್ಲಿ 2.39 ಅಂಕ ಪಡೆದು ಕಳಪೆ ಸಾಧನೆ ಮಾಡಿದೆ. ಲಿಂಗಾಧರಿತ ಸೂಚ್ಯಂಕದಲ್ಲಿ 4.38 ಅಂಕ ಪಡೆದಿದೆ. ಒಟ್ಟಾರೆ 3.39 ಅಂಕಗಳನ್ನು ಪಡೆದಿರುವ ದೆಹಲಿ ಪಟ್ಟಿಯಲ್ಲಿ 59 ನೇ ಸ್ಥಾನ ಪಡೆದಿದೆ. ಒಟ್ಟಾರೆ 7.62 ಅಂಕ ಪಡೆದಿರುವ ಜೈಪುರ್ ಎಂಟನೇ ಸುರಕ್ಷಿತ ನಗರವಾಗಿ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಚೆನ್ನೈ 22 ನೇ ಸ್ಥಾನ ಪಡೆದಿದ್ದರೆ, ಮುಂಬೈ 48 ನೇ ಸ್ಥಾನ ಪಡೆದಿದೆ.
ಅತ್ಯಂತ ಸೆಕ್ಯುಲರ್ ದೇಶವಾದ ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್ ಒಟ್ಟಾರೆ 3.78/10 ಅಂಕ ಪಡೆದು ಕಡಿಮೆ ಸುರಕ್ಷಿತ ನಗರ ಎಂದು ಗುರುತಿಸಲ್ಪಟ್ಟಿದೆ. ಒಟ್ಟಾರೆ 4.86 ಅಂಕಗಳೊಂದಿಗೆ ರೋಮ್ ನಗರ 55 ನೇ ಸ್ಥಾನ ಪಡೆದಿದೆ.