janadhvani

Kannada Online News Paper

“ಅವಳನ್ನು ಅಟ್ಟಾಡಿಸಬೇಡಿ”:ಫೆ.25 ರಿಂದ ರಾಜ್ಯ SჄS ವತಿಯಿಂದ ಹಿಜಾಬ್ ಅಭಿಯಾನ

ಮಂಗಳೂರು : ಇತ್ತೀಚೆಗೆ ರಾಜ್ಯದಲ್ಲಿ ಪ್ರಕರಣವೆಂಬಂತೆ ಬಿಂಬಿಸಲಾಗಿರುವ “ಹಿಜಾಬ್” ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸುವ ಸಲುವಾಗಿ ಕರ್ನಾಟಕ ರಾಜ್ಯ ಎಸ್ ವೈ ಎಸ್ ವತಿಯಿಂದ ಹಿಜಾಬ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್ ವೈ ಎಸ್ ರಾಜ್ಯಾಧ್ಯಕ್ಷರಾದ ಡಾ|ಎಂ.ಎಸ್.ಎಂ ಅಬ್ದುರ್ರಶೀದ್ ಝೈನಿ ಕಾಮಿಲ್ ಹೇಳಿದ್ದಾರೆ.

ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಮವಸ್ತ್ರ ಸಮಸ್ಯೆ ಸಂಬಂಧಿಸಿದಂತೆ ಕರ್ನಾಟಕ ಉಚ್ಛ ನ್ಯಾಯಾಲಯವು ಮಧ್ಯಂತರ ಆದೇಶವನ್ನು ಹೊರಡಿಸಿದ್ದು,ಅದನ್ನು ತಪ್ಪಾಗಿ ಗ್ರಹಿಸಿ ಹಲವು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಂಸ್ಥೆಗಳ ಪ್ರಾಧ್ಯಾಪಕರು ಮತ್ತು ಪ್ರಾಂಶುಪಾಲರಿಂದ ಪ್ರವೇಶ ನಿರಾಕರಿಸಲಾಗಿದೆ.

ಅವಳನ್ನು “ಅಟ್ಟಾಡಿಸಬೇಡಿ” ಎಂಬ ಶೀರ್ಷಿಕೆಯಲ್ಲಿ ಈ ಅಭಿಯಾನವನ್ನು ನಡೆಸಲಾಗುವ ಉದ್ದೇಶವೇನೆಂದರೆ, ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯನ್ನು ಶೈಕ್ಷಣಿಕ ಕೇಂದ್ರಗಳಿಂದ ಪ್ರಾಂಶುಪಾಲರು, ಪ್ರಾಧ್ಯಾಪಕರು ಒದ್ದೋಡಿಸುತ್ತಿದ್ದಾರೆ, ಕೆಲವು ಕ್ಯಾಂಪಸ್‌ಗಳಲ್ಲಿ ಮಾಧ್ಯಮ ವರದಿಗಾರರು ಅಪ್ರಾಪ್ತ ವಿದ್ಯಾರ್ಥಿನಿಗಳನ್ನು ಅಟ್ಟಾಡಿಸಿ, ವೀಡಿಯೋ ಚಿತ್ರೀಕರಿಸುವುದು, ದಬ್ಬಾಳಿಕೆಯಿಂದ ಹೇಳಿಕೆ ಪಡೆಯುವುದು ಮುಂತಾದ ಅಮಾನವೀಯ ಕೃತ್ಯಗಳು ನಡೆಯುತ್ತಿದೆ.

ಶಾಂತಿಯುತ ವಾತಾವರಣದಲ್ಲಿ ಶಿಕ್ಷಣ ಪಡೆಯುತ್ತಿದ್ದ ಮುಸ್ಲಿಂ ವಿದ್ಯಾರ್ಥಿನಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರವು ಹಿಜಾಬ್ ವಿವಾದದ ಹಿಂದೆ ಅಡಗಿರುವ ಶಂಕೆ ವ್ಯಕ್ತವಾಗಿದೆ. ಈ ಸಮಸ್ಯೆಯಿಂದಾಗಿ ಮುಸ್ಲಿಂ ವಿದ್ಯಾರ್ಥಿನಿಗಳು ಮಾನಸಿಕವಾಗಿ ಹಿಂಸೆ,ಖಿನ್ನತೆ ಅನುಭವಿಸುವಂತಾಗಿದೆ.

ನಿಜ ಹೇಳುವುದಾದರೆ, ತಲೆಗೆ ಹಾಕುವ ವೇಲ್ ಗೆ ಹಿಜಾಬ್ ಎಂಬ ಪದವಿಲ್ಲ, ಹಿಂದೆ ಸ್ಕಾರ್ಫ್ ವಿವಾದ ಉಂಟಾಗಿತ್ತು, ಇದೀಗ ಅದನ್ನು ಹಿಜಾಬ್ ಎಂಬ ಹೆಸರಿನಲ್ಲಿ ಮಾಧ್ಯಮದವರು ಪ್ರಚಾರಪಡಿಸಿರುವ ಹಿಂದೆ ಯಾವುದೋ ಗೂಢ ತಂತ್ರ ಅಡಗಿದೆ. ಹಿಜಾಬ್ ಅಂದರೆ ಕೇವಲ ಶಿರವಸ್ತ್ರವಲ್ಲ ಅದು ಸಂಪೂರ್ಣ ಶರೀರವನ್ನು ಅನ್ಯರಿಂದ ಮುಚ್ಚಲ್ಪಡುವ ಇಸ್ಲಾಮಿನ ಧಾರ್ಮಿಕ ಆಚರಣೆಯ ಭಾಗವಾಗಿದೆ.

ವಿದ್ಯಾರ್ಥಿನಿಗಳು ಅವರ ತಲೆಯನ್ನು ಮುಚ್ಚುವ ಸ್ಕಾರ್ಫ್ ಅಥವಾ ಸಮವಸ್ತ್ರದ ವೇಲ್ ನ್ನು ತಲೆಗೆ ಹಾಕುವ ಅನುಮತಿಯನ್ನಷ್ಟೇ ಕೇಳುತ್ತಿದ್ದಾರೆ. ಅದು ಹಿಜಾಬಿನ ಒಂದು ಪ್ರಮುಖ ಅಂಶವಾಗಿದೆ. ಅದಕ್ಕೂ ಅನುಮತಿ ನೀಡದೆ, ಮುಸ್ಲಿಂ ವಿದ್ಯಾರ್ಥಿನಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಪ್ರಯತ್ನ ನಡೆಯುತ್ತಿದೆ.

ಕೆಲವು ಶಾಲೆ- ಕಾಲೇಜುಗಳಲ್ಲಿ ಏಕಪಕ್ಷೀಯ ಧೋರಣೆ ನಡೆಯುತ್ತಿದೆ. ಕೆಲವು ವಿದ್ಯಾ ಕೇಂದ್ರಗಳು ಕೋಮುವಾದದ ಪ್ರಯೋಗ ಶಾಲೆಯಾಗಿ ಮಾರ್ಪಟ್ಟಿದೆ, ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಲ್ಲದ, ಹೊರಗಿನ ರಾಜಕೀಯ ಪ್ರೇರಿತ ಶಕ್ತಿಗಳ ಹಸ್ತಕ್ಷೇಪ ನಡೆಯುತ್ತಿದೆ. ಸಂವಿಧಾನ ವಿರೋದಿ ಚಟುವಟಿಕೆಗಳು ನಡೆಯುತ್ತಿದೆ. ಮಾಧ್ಯಮ ವರದಿಗಾರರಿಂದ ದುರ್ವರ್ತನೆ ಉಂಟಾಗಿದೆ.

ಇದರ ವಿರುದ್ಧವಾಗಿ ರಾಜ್ಯ ಸುನ್ನೀ ಯುವಜನ ಸಂಘ ಎಸ್ ವೈ ಎಸ್ ಹಿಜಾಬ್ ಅಭಿಯಾನವನ್ನು ರಾಜ್ಯಾದ್ಯಂತ ನಡೆಸಲು ಮುಂದಾಗಿದೆ. ಫೆ.25 ರಂದು ಮಂಗಳೂರಿನಲ್ಲಿ ಅಭಿಯಾನವು ಆರಂಭಗೊಳ್ಳಲಿದೆ. “ಅವಳನ್ನು ಅಟ್ಟಾಡಿಸಬೇಡಿ” ಎಂಬ ಶೀರ್ಷಿಕೆಯಲ್ಲಿ ರಾಜ್ಯಾದ್ಯಂತ ವಿವಿಧ ಕೇಂದ್ರಗಳಲ್ಲಿ ಅಭಿಯಾನದ ಅಂಗವಾಗಿ ಬೃಹತ್ ಪ್ರತಿಭಟನೆಗಳನ್ನು ನಡೆಸಲಾಗುತ್ತದೆ.