ಬೆಂಗಳೂರು: ಬೆಂಗಳೂರಿನ ಚಂದ್ರಾ ಲೇಔಟ್ ನ ವಿದ್ಯಾಸಾಗರ್ ಶಾಲೆಯಲ್ಲಿ ಹಿಜಾಬ್ ವಿವಾದಕ್ಕೆ ಕಾರಣವಾಗಿದ್ದಾರೆ ಎಂದು ಹೇಳಲಾಗುತ್ತಿರುವ ಶಿಕ್ಷಕಿ ಶಶಿಕಲಾ ಅವರನ್ನು ಶಾಲಾ ಆಡಳಿತ ಮಂಡಳಿ ಅಮಾನತು ಮಾಡಿದೆ.
ಹಿಜಾಬ್ ಬಗ್ಗೆ ಅವಹೇಳನಕಾರಿಯಾಗಿ ತರಗತಿಯ ಬೋರ್ಡ್ ನಲ್ಲಿ ಶಿಕ್ಷಕಿ ಶಶಿಕಲಾ ಬರೆದಿದ್ದಾರೆ ಎಂಬ ಆರೋಪದಿಂದ ಇಂದು ಬೆಳಗ್ಗೆ ಚಂದ್ರಾ ಲೇಔಟ್ ನ ವಿದ್ಯಾಸಾಗರ್ ಶಾಲೆ ಬಳಿ ತೀವ್ರ ಗಲಾಟೆ ಉಂಟಾಗಿದ್ದು, ಸ್ಥಳಕ್ಕೆ ಪೋಷಕರು ಬಂದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಮತ್ತು ಡಿಡಿಪಿಐ ಉಪ ನಿರ್ದೇಶಕರು ಆಗಮಿಸಿದ್ದಾರೆ. ಸದ್ಯ ಪೋಷಕರ ಒತ್ತಾಯದ ಮೇರೆಗೆ ಶಿಕ್ಷಕಿ ಶಶಿಕಲಾರನ್ನು ಅಮಾನತುಮಾಡಲಾಗಿದೆ ಎಂದು ಶಾಲೆಯ ಪ್ರಾಂಶುಪಾಲ ಶಿವಕುಮಾರ್ ತಿಳಿಸಿದ್ದಾರೆ.
ಶಾಲೆಯ ಮೂರು ಮಕ್ಕಳ ಇನಿಷಿಯಲ್ ಕೆಎಲ್ಎಸ್ ಎಂದು ಬರೆದಿದ್ದಾರೆ ಎಂದು ಪೋಷಕರು ಆಕ್ರೋಶ ಹೊರಹಾಕಲಾರಂಭಿಸಿದರು. ನಿನ್ನೆ ತರಗತಿಯಲ್ಲಿ ಏನು ನಡೆಯಿತು ಎಂದು ನನಗೆ ಗೊತ್ತಿರಲಿಲ್ಲ. ಇಂದು ಬಿಇಒ ಮತ್ತು ಡಿಡಿಪಿಐ ಬಂದು ಮಾತನಾಡಿದಾಗ ವಿಷಯ ಗೊತ್ತಾಯಿತು ನೀವು ಗಣಿತ ಶಿಕ್ಷಕಿಯಾಗಿ ನಿಮ್ಮ ಕಲಿಕೆಯ ವಿಷಯದ ಬಗ್ಗೆ ಮಾತ್ರ ಮಾತನಾಡಬೇಕು, ಬೇರೆ ಸೂಕ್ಷ್ಮ ವಿಚಾರಗಳನ್ನು ವಿದ್ಯಾರ್ಥಿಗಳ ಜೊತೆ ಮಾತನಾಡಬಾರದು ಎಂದು ಹೇಳಿ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ವಿದ್ಯಾಸಾಗರ್ ಶಾಲೆಯಲ್ಲಿ ಹಿಜಾಬ್ ವಿವಾದ ಸೃಷ್ಟಿಯಾಗಿಲ್ಲ-ಪೋಷಕರು
ವಿದ್ಯಾಸಾಗರ್ ಶಾಲೆಯ ಶಿಕ್ಷಕಿಯೊಬ್ಬರು ‘ಕೆಎಲ್ಎಸ್’ ಅಂತಾ ಬೋರ್ಡ್ ಮೆಲೆ ಬರೆದಿದ್ದಾರೆ. ಇದೊಂದು ಇನ್ಶಿಯಲ್ ಅಲ್ಲ. ಇದರ ಹಿಂದೆ ಏನೋ ಕೆಟ್ಟ ಪದ, ವಿಚಾರ ಇರಬೇಕು ಎಂದು ಪೋಷಕರು ಕಿಡಿಕಾರಿದ್ದಾರೆ. ಅದರ ಹೊರತಾಗಿ ಘಟನೆಯ ಸಂಬಂಧ ಶಾಲೆಯಲ್ಲಿ ಪರಿಶೀಲನೆ ನಡೆಯುತ್ತಿದೆ. ಆದರೆ ಇಲ್ಲಿ ಯಾವುದೇ ಹಿಜಾಬ್ ವಿವಾದ ಸೃಷ್ಟಿಯಾಗಿಲ್ಲ ಎಂದು ಶಾಲಾ ವಿದ್ಯಾರ್ಥಿಗಳ ಪೋಷಕರು ಹೇಳಿದ್ದಾರೆ.
ವಿವಾದಿತ ಶಿಕ್ಷಕಿ ವಿರುದ್ಧ ಚಂದ್ರಾ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ ಪೋಷಕರು:
ಬೆಂಗಳೂರಿನ ವಿದ್ಯಾಸಾಗರ ಶಾಲೆಯಲ್ಲಿ ವಿವಾದ ವಿಚಾರ ಶಿಕ್ಷಕಿ ವಿರುದ್ಧ ಪೋಷಕರು ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚಂದ್ರ ಲೇಔಟ್ ಪೊಲೀಸ್ ಠಾಣೆ ಬಳಿ ಸೇರಿರುವ ಪೋಷಕರು ಶಿಕ್ಷಕಿ ವಿರುದ್ಧ ದೂರು ನೀಡಿದ್ದು, ಚಂದ್ರಾ ಲೇಔಟ್ ಪೊಲೀಸರು ದೂರು ಸ್ವೀಕರಿಸಿದ್ದಾರೆ.







