ಕೋಝಿಕ್ಕೋಡ್ | ಕರ್ನಾಟಕದ ಕೆಲವು ಕಾಲೇಜುಗಳಲ್ಲಿ ಹಿಜಾಬ್ ಧರಿಸಿರುವ ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಉಸ್ತಾದ್ ಹೇಳಿದ್ದಾರೆ.
ಭಾರತವು ಬಹುತ್ವ ಸಾರುವ ಜಾತ್ಯತೀತ ರಾಷ್ಟ್ರವಾಗಿದ್ದು, ಉಳಿದೆಲ್ಲವೂ ಅದರ ಅವಿಭಾಜ್ಯ ಪರಿಕಲ್ಪನೆಯಡಿಯಲ್ಲಿದೆ ಎಂಬುದು ಆಳುವವರಿಗೆ ಅರ್ಥವಾಗದಿರುವುದು ಖೇದಕರ ಎಂದು ಕಾಂತಪುರಂ ಹೇಳಿದರು.
ಈ ದೇಶದಲ್ಲಿ ಮುಸ್ಲಿಮರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಪ್ರತ್ಯೇಕಿಸುವ ಹುನ್ನಾರ ಕೆಲವರ ಮನದಲ್ಲಿ ಮೂಡಿದೆ ಎಂಬ ಅನುಮಾನವಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ತಾನು ಬಯಸಿದ ಧರ್ಮವನ್ನು ಆಚರಿಸುವ ಸ್ವಾತಂತ್ರ್ಯವಿದೆ. ನಮ್ಮ ಸಂವಿಧಾನವು ಧಾರ್ಮಿಕ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಿದೆ. ಧರ್ಮ ಪಾಲಿಸುವವರಿಗೆ ಶಿಕ್ಷಣದ ಹಕ್ಕನ್ನು ನಿರಾಕರಿಸಬಾರದು. ಮುಸ್ಲಿಂ ಹೆಣ್ಣುಮಕ್ಕಳಿಗೆ ಹಿಜಾಬ್ ಧರಿಸುವ ಹಕ್ಕನ್ನೂ ಸಂವಿಧಾನ ನೀಡಿದೆ ಎಂದು ಅವರು ಹೇಳಿದರು.
ನಮ್ಮ ಸಂವಿಧಾನವು ನಮಗೆ ಇಷ್ಟವಾದ ಧರ್ಮವನ್ನು ಅಳವಡಿಸಿಕೊಳ್ಳಲು ಮತ್ತು ಆಚರಿಸಲು ಸ್ವಾತಂತ್ರ್ಯವನ್ನು ನೀಡಿದಾಗ, ಯಾವ ಆಧಾರದ ಮೇಲೆ ಕೆಲವರು ನಿರಂತರವಾಗಿ ಕೋಮು ಧ್ರುವೀಕರಣವನ್ನು ಸೃಷ್ಟಿಸುತ್ತಿದ್ದಾರೆ? ಮತ್ತು ಸಂವಿಧಾನ ನೀಡಿದ ಹಕ್ಕನ್ನು ನಿಷೇಧಿಸುತ್ತಿದ್ದಾರೆ? 2015 ರ ಕೇರಳ ಹೈಕೋರ್ಟ್ ತೀರ್ಪಿನಲ್ಲಿ, ಭಾರತದಂತಹ ಬಹು ಜನಾಂಗೀಯ ದೇಶದಲ್ಲಿ ಡ್ರೆಸ್ ಕೋಡ್ ಅನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿರುವುದು ನೆನಪಿಗೆ ಬರುತ್ತಿದೆ.
ಹಿಜಾಬ್‌ನಂತೆಯೇ ಇತರ ಧಾರ್ಮಿಕ ಚಿಹ್ನೆಗಳು ಸಾಂವಿಧಾನಿಕ ರಕ್ಷಣೆಯನ್ನು ಹೊಂದಿವೆ. ಹಿಜಾಬ್, ಸಿಂಧೂರ ಮತ್ತು ಸಿಖ್ಖರ ಪೇಟ, ಶಿಲುಬೆ ಎಲ್ಲವೂ ನಮ್ಮ ದೇಶದ ವೈವಿಧ್ಯಗಳು. ಎಲ್ಲಾ ಧರ್ಮಗಳನ್ನು ಒಳಗೊಳ್ಳಲು ಮತ್ತು ಒಪ್ಪಿಕೊಳ್ಳಲು ನಮ್ಮ ದೇಶದ ಜಾತ್ಯತೀತತೆ ಕಲಿಸುತ್ತದೆ. ಇತರ ಧರ್ಮೀಯರಿಗೆ ಅವರ ಧಾರ್ಮಿಕ ನಂಬಿಕೆಯನ್ನು ಆಚರಿಸಬಹುದಾದಲ್ಲಿ, ಮುಸ್ಲಿಮರನ್ನು ಮಾತ್ರ ತಡೆಯುವುದು ರಹಸ್ಯ ಅಜೆಂಡಾದ ಭಾಗವಾಗಿದೆ ಎಂದಷ್ಟೇ ಊಹಿಸಲು ಸಾಧ್ಯ. ಸಂಬಂಧಪಟ್ಟವರು ಇಂತಹ ನಡೆಗಳಿಂದ ಕೂಡಲೇ ಹಿಂದೆ ಸರಿಯಬೇಕು ಎಂದು ಕಾಂತಪುರಂ ಆಗ್ರಹಿಸಿದರು.