ಬೆಂಗಳೂರು: ಉಡುಪಿ ಹಾಗೂ ರಾಜ್ಯದ ಕೆಲವು ಜಿಲ್ಲೆಗಳ ಸರ್ಕಾರಿ ಶೈಕ್ಷಣಿಕ ಕೇಂದ್ರಗಳಲ್ಲಿ ಉದ್ಭವಿಸಿರುವ ಹಿಜಾಬ್ ಸಮಸ್ಯೆ ಬಗ್ಗೆ ರಾಜ್ಯ ಶಿಕ್ಷಣ ಸಚಿವರೊಂದಿಗೆ ಸಮಾಲೋಚನೆ ನಡೆಸಿದ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾದ ಎನ್ ಕೆ ಎಂ ಶಾಫಿ ಸಅದಿಯವರು ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದ ನೀಡದೇ ಯಥಾಸ್ಥಿತಿ ಕಾಪಾಡಬೇಕು ಎಂದಿದ್ದಾರೆ.
ಹೈಕೋರ್ಟ್ ತೀರ್ಪು ಬರುವವರೆಗೆ ಸಂಹಿತೆ ಪಾಲಿಸಬೇಕು. ಹಿಜಾಬ್ ಗೊಂದಲ ಶೀಘ್ರ ಪರಿಹಾರವಾಗಬೇಕು. ಮಕ್ಕಳ ಭವಿಷ್ಯಕ್ಕೆ ಇದರಿಂದ ತೊಡಕಾಗಬಾರದು. ಹೈಕೋರ್ಟ್ ಅಂತಿಮ ಆದೇಶಕ್ಕೆ ನಾವೆಲ್ಲರೂ ಬದ್ಧರಾಗಬೇಕಿದೆ ಎಂದು ವಕ್ಫ್ ಬೋರ್ಡ್ ಅಧ್ಯಕ್ಷರಾದ ಶಾಫಿ ಸಅದಿ ಹೇಳಿದರು.
ಕರಾವಳಿ ಮತ್ತು ಮಲೆನಾಡಿನ ಕೆಲ ಸರ್ಕಾರಿ ಕಾಲೇಜುಗಳಲ್ಲಿ ಉದ್ಘವಿಸಿರುವ ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಕುರಿತು ಬೆಂಗಳೂರಲ್ಲಿ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಶಿಕ್ಷಣ ಕಾಯ್ದೆಯನ್ವಯ ಪ್ರಕಟಿಸಿರುವ ಸುತ್ತೋಲೆಯನ್ನು ಎಲ್ಲರೂ ಗೌರವಿಸಬೇಕು ಎಂದರು.
ರಾಜ್ಯದ ಹಲವೆಡೆಯಿಂದ ಸಮಾಜದ ಮುಖಂಡರು ಕರೆ ಮಾಡಿ, ಹಿಜಾಬ್ ಧರಿಸಿದರೆ ಕಾಲೇಜ್ ಪ್ರವೇಶಕ್ಕೆ ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ. ಇದು ಖೇದಕರ ಸಂಗತಿ, ಶೈಕ್ಷಣಿಕವಾಗಿ ನಮ್ಮ ಸಮುದಾಯ ಬಹಳ ಹಿಂದುಳಿದಿದೆ. ಹಿಜಾಬ್ ವಿಚಾರ ರಾಜ್ಯದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಇದಕ್ಕೆ ಬ್ರೇಕ್ ಹಾಕದಿದ್ದರೆ ಶಿಕ್ಷಣ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಲಿದೆ ಎಂದರು.
ಈ ವಿವಾದ ಇದೀಗ ಹೈಕೋರ್ಟ್ ಪರಿಶೀಲನೆಯಲ್ಲಿದೆ. ಹೈಕೋರ್ಟ್ ನೀಡುವ ಆದೇಶಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಈ ಮೊದಲೂ ರಾಜ್ಯದ ಹಲವೆಡೆ ನಮ್ಮ ಸಮುದಾಯದ ಮಕ್ಕಳು ಹಿಜಾಬ್ ಧರಿಸಿ ಶಾಲೆಗೆ ಬರುತ್ತಿದ್ದರು. ಅಂಥ ಸ್ಥಳಗಳಲ್ಲಿ ಮೊದಲಿನಂತೆಯೇ ವ್ಯವಸ್ಥೆ ಮುಂದುವರಿಸಬೇಕು. ಹೊಸದಾಗಿ ಹಿಜಾಬ್ ಧರಿಸಿ ಬಂದ ಕಡೆ ತಡೆಯೊಡ್ಡಿದ್ದಾರೆ. ಅಂಥ ಸ್ಥಳಗಳಲ್ಲಿ ಯಥಾಸ್ಥಿತಿ ಕಾಪಾಡುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಕುರಿತು ಶಿಕ್ಷಣ ಸಚಿವರು ನನಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.








