ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ಆದೇಶ ಹೊರಡಿಸಿದ್ದು, ಕೋವಿಡ್ ಸಹಿತ ಯಾವುದೇ ಕಾಯಿಲೆಗಳು ಗಂಭೀರವಾಗಿಲ್ಲದಿದ್ದರೆ ಮುಂದಿನ ಎರಡು ವಾರ ಆ ರೋಗಿಗಳು ಆಸ್ಪತ್ರೆಗಳಿಗೆ ಭೇಟಿ ನೀಡಬಾರದು. ಮನೆಯಲ್ಲೇ ಆರೈಕೆಗೆ ಒಳಪಡಬೇಕು ಎಂದು ತಿಳಿಸಿದೆ.
ತುರ್ತು ಚಿಕಿತ್ಸೆಯ ಆವಶ್ಯಕತೆ ಇರುವ ರೋಗಿಗಳು ಮಾತ್ರ ಆಸ್ಪತ್ರೆಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ಸ್ವಾಯತ್ತ ಆರೋಗ್ಯ ಸಂಸ್ಥೆಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು. ಸೌಮ್ಯ ಲಕ್ಷಣಗಳಿರುವ ರೋಗಿಗಳು ಮುಂದಿನ ಎರಡು ವಾರ ಅಥವಾ ಮುಂದಿನ ಆದೇಶದ ವರೆಗೆ ಆಸ್ಪತ್ರೆಗಳಿಗೆ ಭೇಟಿ ನೀಡಬಾರದು. ಮನೆಯಲ್ಲೇ ಆರೈಕೆಗೆ ಒಳಪಡಬೇಕು ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ಕುಮಾರ್ ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳಿಗೂ ಈ ಆದೇಶ ಅನ್ವಯ ಆಗಲಿದೆ ಎಂದು ತಿಳಿದು ಬಂದಿದೆ.
ಕೋವಿಡ್-19 ಪರೀಕ್ಷೆಗೆ ಮಾದರಿ ಕೊಟ್ಟವರು ಫಲಿತಾಂಶ ಬರುವವರೆಗೆ ಐಸೋಲೇಶನ್ ಅಥವಾ ಹೋಮ್ ಕ್ವಾರಂಟೈನ್‌ನಲ್ಲೇ ಇರಬೇಕು. ನಿಯಮ ಉಲ್ಲಂಹಿಸಿ ಹೊರಬಂದರೆ ಕಾನೂನು ಕ್ರಮ ಜರಗಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಚ್ಚರಿಸಿದೆ.ಕೋವಿಡ್ ಪರೀಕ್ಷೆಗಾಗಿ ಮಾದರಿ ಕೊಟ್ಟವರಲ್ಲಿ ಸೋಂಕು ಇರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪರೀಕ್ಷೆಗೆ ಮಾದರಿ ನೀಡಿ ಬೇಕಾಬಿಟ್ಟಿ ಅಡ್ಡಾಡಿದರೆ ಕಾನೂನು ಕ್ರಮ ಕೈಗೊಳ್ಳ ಲಾಗುವುದು ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ.
ಅನೇಕ ರೋಗಿಗಳು ಅಗತ್ಯವಿಲ್ಲದಿದ್ದರೂ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.ಇದನ್ನು ತಪ್ಪಿಸಿ ಅಗತ್ಯವಿರುವವರಿಗೆ ಹಾಸಿಗೆ ಒದಗಿಸಲು ವೈದ್ಯರ ಸಲಹೆ, ಮಾರ್ಗದರ್ಶನ ಅಗತ್ಯ. ದೂರವಾಣಿ ಕರೆ ಮಾರ್ಗದರ್ಶನ ನೀಡಿದರೆ, ಅನುಕೂಲವಾಗುತ್ತದೆ. ಎಂದು ಆರೋಗ್ಯ ಸಚಿವ ತಿಳಿಸಿದ್ದಾರೆ