janadhvani

Kannada Online News Paper

ವೀಕೆಂಡ್ ಕರ್ಫ್ಯೂ ಮಧ್ಯೆ ಭಾರೀ ಜನಸ್ತೋಮದೊಂದಿಗೆ ರಥೋತ್ಸವ

ಜನರು ಅಂಗಡಿ ಮುಗ್ಗಟ್ಟು ತೆರೆಯದಂತೆ ನಿಯಮ ರೂಪಿಸಿದರೆ ಇಲ್ಲಿ ಜನ ಸೇರಿ ರಥೋತ್ಸವ ಮಾಡಬಹುದೇ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಉಡುಪಿ:  ಒಂದು ಕಡೆ ಕೋರೊನಾ ನಿಗ್ರಹಿಸಲು ಸರಕಾರ ವಾರಾಂತ್ಯ ಕರ್ಫ್ಯೂ ಘೋಷಿಸಿ ಜನ ಸಾಮಾನ್ಯರ ಅಂಗಡಿ ಮುಗ್ಗಟ್ಟನ್ನು ಮುಚ್ಚಿಸಿದೆ. ಇನ್ನೊಂದೆಡೆ ರಥ ಬೀದಿಯಲ್ಲಿ ಭಾರೀ ಜನಸ್ತೋಮದೊಂದಿಗೆ ರಥೋತ್ಸವ ನಡೆಯುತ್ತಿದೆ. ಸರಕಾರ ಹೊರಡಿಸಿರುವ ಎಲ್ಲ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ರಥೋತ್ಸವದಲ್ಲಿ ಭಾರೀ ಜನ ಸೇರಿರುವ ಕುರಿತು ವರದಿಯಾಗಿದೆ.

ಪ್ರತಿಭಟನೆ, ಮೆರವಣಿಗೆ,ಸಮಾವೇಶಗಳಿಗೆ ಬ್ರೇಕ್ ಹಾಕಿರುವ ಸರಕಾರ ಇಲ್ಲಿ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ಜಿಲ್ಲಾಡಳಿತ ಈ ವಿಚಾರದಲ್ಲಿ ದಿವ್ಯ ಮೌನಕ್ಕೆ ಶರಣಾಗಿದೆ. ಜನರು ಅಂಗಡಿ ಮುಗ್ಗಟ್ಟು ತೆರೆಯದಂತೆ ನಿಯಮ ರೂಪಿಸಿದರೆ ಇಲ್ಲಿ ಜನ ಸೇರಿ ರಥೋತ್ಸವ ಮಾಡಬಹುದೇ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇದೀಗ ಇಲ್ಲಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಪ್ರಕರಣ ದಾಖಲಾಗಬಹುದೇ ಎಂಬುವುದನ್ನು ಕಾದು ನೋಡಬೇಕಾಗಿದೆ.

ಮಕರ ಸಂಕ್ರಮಣದಂದು ಉಡುಪಿ ಶ್ರೀಕೃಷ್ಣನ ಪ್ರತಿಷ್ಠೆಯ ಸಂಸ್ಮರಣೆಗಾಗಿ ಸಂಕ್ರಮಣದ‌ ಮರುದಿನ ಹಗಲು‌ ಬ್ರಹ್ಮ ರಥೋತ್ಸವ, ಚೂರ್ಣೋತ್ಸವದೊಂದಿಗೆ ಸಪ್ತೋತ್ಸವ ಶನಿವಾರ ಸಂಪನ್ನಗೊಂಡಿತು. ದ್ವೈತ ಮತ ಸ್ಥಾಪಕ ಶ್ರೀಮಧ್ವಾಚಾರ್ಯರು ಮಕರ ಸಂಕ್ರಮಣದಂದು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ್ದು, ಈ ಹಿನ್ನೆಲೆಯಲ್ಲಿ ಸಪ್ತೋತ್ಸವ, ಮಕರ ಸಂಕ್ರಮಣದ ರಾತ್ರಿ ಬ್ರಹ್ಮ ರಥ ಸಹಿತ ತ್ರಿರಥೋತ್ಸವ, ಹಗಲು ಬ್ರಹ್ಮರಥ ಸಹಿತ ಚೂರ್ಣೋತ್ಸವ ವಿಶೇಷವಾಗಿ‌ ನಡೆಯುತ್ತದೆ.

error: Content is protected !! Not allowed copy content from janadhvani.com