ರಿಯಾದ್: ದೇಶಾದ್ಯಂತ ವಿವಿಧ ವ್ಯವಹಾರಗಳ ಉದ್ಯೋಗಿಗಳು ಆರೋಗ್ಯ ಕಾರ್ಡ್ ಹೊಂದಿಲ್ಲದಿದ್ದರೆ 2,000 ರಿಯಾಲ್ (ಅಂದಾಜು 40,000 ರೂ.) ದಂಡವನ್ನು ವಿಧಿಸಲಾಗುವುದು ಎಂದು ಸೌದಿಯ ನಗರ, ಗ್ರಾಮೀಣ ವ್ಯವಹಾರಗಳು ಮತ್ತು ವಸತಿ ಸಚಿವಾಲಯವು ಘೋಷಿಸಿದೆ.
ಉದ್ಯೋಗಿಗಳ ಆರೋಗ್ಯ ಸ್ಥಿತಿಯನ್ನು ಪರೀಕ್ಷಿಸುವ ಕಾರ್ಡ್ ಇದಾಗಿದ್ದು, ಯಾವುದೇ ಸಮಸ್ಯೆ ಇಲ್ಲ ಮತ್ತು ಕೆಲಸ ಮಾಡಲು ಯೋಗ್ಯರು ಎಂಬುದನ್ನು ಈ ಕಾರ್ಡ್ ಸಾಬೀತುಪಡಿಸುತ್ತದೆ. ಬಲದಿಯಾ ಕಾರ್ಡ್ ಎಂದೂ ಕರೆಯಲ್ಪಡುವ ಇದನ್ನು ಕ್ಲಿನಿಕ್‌ನಲ್ಲಿ ವೈದ್ಯಕೀಯ ಪ್ರಯೋಗಾಲಯ ಪರೀಕ್ಷೆಯ ನಂತರ ರೋಗಿಯಲ್ಲ ಎಂದು ಖಚಿತಪಡಿಸಲು ನಗರ ಸಭೆಯು ನೀಡುತ್ತದೆ.
ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಅಂಗಡಿಗಳು, ರೆಸ್ಟೋರೆಂಟ್‌ಗಳು ಮತ್ತು ಕೆಫೆಗಳಲ್ಲಿ ಕೆಲಸ ಮಾಡುವ ಎಲ್ಲಾ ಉದ್ಯೋಗಿಗಳು, ಕ್ಷೌರಿಕ ಅಂಗಡಿ ಉದ್ಯೋಗಿಗಳು, ಅಡುಗೆಯವರು ಮತ್ತು ಮನೆಗೆಲಸಗಾರರು ಮುಂತಾದ ಸಾರ್ವಜನಿಕರ ಆರೋಗ್ಯಕ್ಕೆ ಸಂಬಂಧಿಸಿ ಕೆಲಸಮಾಡುವ ಎಲ್ಲಾ ನೌಕರರಿಗೂ ಬಲ್ಡಿಯಾ ಕಾರ್ಡ್ ಕಡ್ಡಾಯವಾಗಿದೆ. ಈ ಕಾರ್ಡ್ ಇಲ್ಲದೆ ನೌಕರರು ಕೆಲಸ ಮುಂದುವರಿಸಿದರೆ, ಆಯಾ ಸಂಸ್ಥೆಗಳಿಗೆ ದಂಡ ವಿಧಿಸಲಾಗುತ್ತದೆ.
ಶನಿವಾರದಿಂದಲೇ ಕಾನೂನು ಜಾರಿಗೆ ಬರಲಿದೆ. ಪ್ರತಿ ಕೆಲಸಗಾರನಿಗೆ 2000 ರಿಯಾಲ್ ದಂಡ. ಕಾರ್ಡಿಲ್ಲದ ಕಾರ್ಮಿಕರ ಸಂಖ್ಯೆಗೆ ಅನುಗುಣವಾಗಿ ದಂಡವು ಹೆಚ್ಚಾಗುತ್ತದೆ.