janadhvani

Kannada Online News Paper

ಇಂಧನ ಬೆಲೆ ಹೆಚ್ಚಳ: ಸಾರ್ವಜನಿಕರ ಆಕ್ರೋಶ- ಸರ್ಕಾರ ಪತನ

2021ರಲ್ಲಿ ಕಝಾಕಿಸ್ತಾನದಲ್ಲಿ ಪ್ರತಿ ಲೀಟರ್ ಗ್ಯಾಸ್ ಬೆಲೆ 50 ಟೆಂಜೆ ( ಭಾರತೀಯ 1 ರೂಪಾಯಿ = 5.84 ಕಝಾಕಿಸ್ತಾನ ಟೆಂಜೆ) ಆಗಿತ್ತು. ಕಳೆದ ವರ್ಷ ಕೊನೆಯ ಹಂತದಲ್ಲಿ ಈ ಬೆಲೆಯನ್ನು 79-80 ಟೆಂಜೆಗೆ ಹೆಚ್ಚಳ ಮಾಡಲಾಯಿತು.

ನೂರ್ ಸುಲ್ತಾನ್, ಜನವರಿ 06: ಇಂಧನ ಬೆಲೆ ಹೆಚ್ಚಳ ಮಾಡಿದ್ದರಿಂದ ಕಝಾಕಿಸ್ತಾನದಲ್ಲಿ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದೆ. ಕಝಕ್ ನಾಗರಿಕರನ್ನು ಹತೋಟಿಗೆ ತರಲು ವಿಫಲವಾಗಿದ್ದರಿಂದ ಅಲ್ಲಿನ ಸರ್ಕಾರ ಪತನಗೊಂಡಿದೆ.

ದೇಶಾದ್ಯಂತ ಪ್ರತಿಭಟನೆಗಳು ಮುಂದುವರಿದಿರುವುದರಿಂದ ಜನೆವರಿ 19ರವರೆಗೆ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ದೇಶದ ಅಧ್ಯಕ್ಷ ಕಾಸಿಮ್ ಜೋಮಾರ್ಟ್ ಟೊಕಾಯೆವ್ ಅವರು ಪ್ರತಿಭಟನೆ ಗಮನದಲ್ಲಿಟ್ಟುಕೊಂಡು ಆರ್ಥಿಕ ರಾಜಧಾನಿಗಳಾಗಿರುವ ಅಲ್ಮಾಟಿ ಮತ್ತು ಮಂಗಿಸ್ತೌ ಪ್ರದೇಶದಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 7 ರವರೆಗೆ ಕರ್ಫ್ಯೂ ವಿಧಿಸಿದ್ದಾರೆ. ಹಲವೆಡೆ ಪೊಲೀಸರು ಲಾಠಿ ಪ್ರಹಾರದ ಜತೆಗೆ ಅಶ್ರುವಾಯು ಪ್ರಯೋಗಿಸಿ ಜನರ ಆಕ್ರೋಶವನ್ನು ತಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು 200 ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡಿದ್ದು, ನೂರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಸದ್ಯ ತುರ್ತು ಪರಿಸ್ಥಿತಿ ಜಾರಿಯಾಗಿರುವ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಇದರೊಂದಿಗೆ ವಾಹನ ಸೇರಿದಂತೆ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ. ರಾಷ್ಟ್ರವ್ಯಾಪಿ ಗಲಾಟೆಗೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದರಲ್ಲಿ ಕಜಕಿಸ್ತಾನದ ಜನರು ಸೇನೆ ಮತ್ತು ಪೊಲೀಸ್ ವಾಹನಗಳನ್ನು ನಿಲ್ಲಿಸಿ ಬೆಂಕಿ ಹಚ್ಚುವುದನ್ನು ಸ್ಪಷ್ಟವಾಗಿ ಕಾಣಬಹುದು.

2021ರಲ್ಲಿ ಕಝಾಕಿಸ್ತಾನದಲ್ಲಿ ಪ್ರತಿ ಲೀಟರ್ ಗ್ಯಾಸ್ ಬೆಲೆ 50 ಟೆಂಜೆ ( ಭಾರತೀಯ 1 ರೂಪಾಯಿ = 5.84 ಕಝಾಕಿಸ್ತಾನ ಟೆಂಜೆ) ಆಗಿತ್ತು. ಕಳೆದ ವರ್ಷ ಕೊನೆಯ ಹಂತದಲ್ಲಿ ಈ ಬೆಲೆಯನ್ನು 79-80 ಟೆಂಜೆಗೆ ಹೆಚ್ಚಳ ಮಾಡಲಾಯಿತು. 2022ರ ಹೊಸ ವರ್ಷದ ಮೊದಲ ದಿನ ಈ ದರವನ್ನು ದುಪ್ಟಟ್ಟು ಮಾಡಲಾಯಿತು. ಅಂದರೆ, 120 ಟೆಂಜೆಗೆ ಹೆಚ್ಚಳ ಮಾಡಲಾಯಿತು. ಇದರಿಂದ ಅಲ್ಲಿನ ನಾಗರಿಕರ ಆಕ್ರೋಶ ಭುಗಿಲೆದ್ದಿತು.

ಮಂಗಿಸ್ತೌದಿಂದ ಪ್ರತಿಭಟನೆ ಆರಂಭ

ದೇಶದಲ್ಲಿ ಇಂಧನ ಬೆಲೆ ಹೆಚ್ಚಳವನ್ನು ವಿರೋಧಿಸಿ ಪ್ರಾರಂಭವಾದ ಆಂದೋಲನವು ಶೀಘ್ರದಲ್ಲೇ ದೇಶದ ಎಲ್ಲಾ ಭಾಗಗಳಿಗೆ ಹರಡಿತು. ಈ ಪ್ರಾಂತ್ಯವು ತೈಲ ಕೇಂದ್ರವಾಗಿರೋದ್ರಿಂದ ಸಾವಿರಾರು ಜನರು ಪ್ರದರ್ಶನ ಮಾಡಿದರು. ಬಳಿಕ ಪ್ರತಿಭಟನೆ ಹತೋಟಿಗೆ ಸಿಗದ ಕಾರಣ ಅಧ್ಯಕ್ಷ ಟೊಕಾಯೆವ್ ಅವರು ದೇಶವನ್ನುದ್ದೇಶಿಸಿ ಮಾತನಾಡಿ, ‘ಸರ್ಕಾರಿ ಮತ್ತು ಮಿಲಿಟರಿ ಕಚೇರಿಗಳ ಮೇಲೆ ದಾಳಿ ಮಾಡುವುದು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. ನಾವು ಪರಸ್ಪರ ನಂಬಿಕೆ ಮತ್ತು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸೋಣ ಹಾಗೂ ಇಂಧನ ಬೆಲೆ ಕಡಿಮೆಗೊಳಿಸುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

error: Content is protected !! Not allowed copy content from janadhvani.com