janadhvani

Kannada Online News Paper

ವಲಸಿಗರಿಗೆ ಶುಭ ಸುದ್ದಿ : ಜ.1 ರಿಂದ ಭಾರತ- ಸೌದಿ ನಡುವೆ ಏರ್ ಬಬಲ್ ಸೇವೆ ಆರಂಭ

ಸೌದಿ ಅರೇಬಿಯಾದೊಂದಿಗೆ ಏರ್ ಬಬಲ್ ಒಪ್ಪಂದ ಮಾಡಿಕೊಳ್ಳಬೇಕೆಂಬ ಅನಿವಾಸಿಗಳ ಬೇಡಿಕೆ ಈಡೇರಿದೆ.

ನವದೆಹಲಿ: ವಲಸಿಗರ ಬೇಡಿಕೆಯಂತೆ ಭಾರತ ಮತ್ತು ಸೌದಿ ಅರೇಬಿಯಾ ನಡುವೆ ಏರ್ ಬಬಲ್ ಒಪ್ಪಂದದಲ್ಲಿ ನೇರ ವಿಮಾನಯಾನ ಸೇವೆ ಆರಂಭಗೊಳ್ಳಲಿದೆ.

ಜನವರಿ 1 ರಿಂದ ಸೇವೆಗಳು ಪ್ರಾರಂಭವಾಗಲಿವೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಪ್ರಕಟಿಸಿದೆ. ಈ ಸಂಬಂಧ ವಿಮಾನಯಾನ ಸಂಸ್ಥೆಗಳಿಗೆ ಮಾಹಿತಿ ನೀಡುವಂತೆ ನಾಗರಿಕ ವಿಮಾನಯಾನ ಸಚಿವಾಲಯವು ನಾಗರಿಕ ವಿಮಾನಯಾನ ಮಹಾನಿರ್ದೇಶಕರಿಗೆ ಸೂಚಿಸಿದೆ.

ಪ್ರಸ್ತುತ ಭಾರತ ಮತ್ತು ಸೌದಿ ಅರೇಬಿಯಾ ನಡುವೆ ಚಾರ್ಟರ್ಡ್ ವಿಮಾನಗಳು ಹಾರಾಟ ನಡೆಸುತ್ತಿದೆ. ಕೋವಿಡ್ ಬಿಕ್ಕಟ್ಟಿನಿಂದಾಗಿ ಭಾರತವು ಸಾಮಾನ್ಯ ಅಂತರಾಷ್ಟ್ರೀಯ ವಿಮಾನಗಳ ಪುನರಾರಂಭವನ್ನು ಮುಂದೂಡಿದೆ. ಈ ಸಂದರ್ಭದಲ್ಲಿ ಸೌದಿ ಅರೇಬಿಯಾದೊಂದಿಗೆ ಏರ್ ಬಬಲ್ ಒಪ್ಪಂದ ಮಾಡಿಕೊಳ್ಳಬೇಕೆಂಬ ಅನಿವಾಸಿಗಳ ಬೇಡಿಕೆ ಈಡೇರಿದೆ. ಹೊಸ ಏರ್ ಬಬಲ್ ಒಪ್ಪಂದದ ಅಡಿಯಲ್ಲಿ, ಕೋವಿಡ್ ನಿಯಮಗಳಿಗೆ ಅನುಸಾರವಾಗಿ ವಿಮಾನಯಾನ ಸಂಸ್ಥೆಗಳು ಎರಡು ದೇಶಗಳ ನಡುವೆ ಸೇವೆಗಳನ್ನು ನಿರ್ವಹಿಸಲು ಸಾಧ್ಯವಾಗಲಿದೆ.

ಏರ್ ಬಬಲ್ ಒಪ್ಪಂದದ ಕುರಿತು ಭಾರತ ಮತ್ತು ಸೌದಿ ಅರೇಬಿಯಾ ಡಿಸೆಂಬರ್ 8 ರಂದು ಮಾತುಕತೆ ನಡೆಸಿದ್ದವು. ನಾಗರಿಕ ವಿಮಾನಯಾನ ಸಚಿವಾಲಯವು ಪರಿಷ್ಕೃತ ಏರ್ ಬಬಲ್ ನಿಯಮಗಳನ್ನು ಸೌದಿ ಅರೇಬಿಯಾದಲ್ಲಿನ ನಾಗರಿಕ ವಿಮಾನಯಾನದ ಸಾಮಾನ್ಯ ಪ್ರಾಧಿಕಾರಕ್ಕೆ ಸಲ್ಲಿಸಿದೆ.ಸೌದಿ ಅರೇಬಿಯಾ ನಿಯಮಗಳಿಗೆ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಜನವರಿ 1 ರಿಂದ ಏರ್ ಬಬಲ್ ಒಪ್ಪಂದದ ಪ್ರಕಾರ ಸೇವೆ ಪ್ರಾರಂಭವಾಗಲಿದೆ.