ಸೌದಿ ಅರೇಬಿಯಾದ ಖಮೀಸ್ ಮುಶೈತ್ ಸಮೀಪದ ಒಳ ಪ್ರದೇಶವೊಂದರಲ್ಲಿ ಎರಡು ವರ್ಷದಿಂದ ವೃತ್ತಿಯಲ್ಲಿದ್ದ ಮಂಗಳೂರು ಮೂಲದ ಮೊಹಮ್ಮದ್ ಅಝರುದ್ದೀನ್ ಎಂಬವರು ಸರಿಯಾದ ಸಂಬಳ, ರೂಮಿನ ವ್ಯವಸ್ಥೆ ಇಲ್ಲದೆ ಸಂಕಷ್ಟದ ಜೀವನ ನಡೆಸುತ್ತಿದ್ದರು. ಮಾತ್ರವಲ್ಲದೆ ಇವರ ಪ್ರಾಯೋಜಕರು ಇಕಾಮ ನವೀಕರಿಸದ ಕಾರಣ,ತಾಯ್ನಾಡಿಗೆ ಮರಳುವುದು ಕೂಡ ಕನಸಿನ ಮಾತಾಗಿತ್ತು. ಇದರಿಂದ ಮಾನಸಿಕವಾಗಿಯೂ ಖಿನ್ನತೆ ಅನುಭಸುತ್ತಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಕೆಸಿಎಫ್ ಖಮೀಸ್ ಮುಶೈತ್ ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಬನ್ನೂರು ಸಂಕಷ್ಟದಲ್ಲಿದ್ದ ಅಝರ್ ಅವರನ್ನು ಸಂಪರ್ಕಿಸಿ ಅವರಿಗೆ ಸಂಘಟನೆಯಿಂದ ಆಗುವ ಎಲ್ಲಾ ಸಹಾಯ ಸಹಕಾರವನ್ನು ನೀಡುವುದಾಗಿ ಭರವಸೆ ಕೊಟ್ಟು, ಧೈರ್ಯ ತುಂಬಿದರು.
ಅದರಂತೆ ಅವರನ್ನು, ಸಂಕಷ್ಟ ಭರಿತವಾದ ಪ್ರದೇಶದಿಂದ ಕರೆದುಕೊಂಡು ಬಂದು ಅವರಿಗೆ ರೂಮ್ ಹಾಗೂ ತಾತ್ಕಾಲಿಕ ಉದ್ಯೋಗದ ವ್ಯವಸ್ಥೆಯನ್ನು ಮಾಡಿ ಕೊಡಲಾಯಿತು.
ನಂತರ ಸುಮಾರು ಮೂರು ವರ್ಷಗಳ ಕಾಲ ಖಮೀಸ್ ಮುಶೈತ್ ನಲ್ಲಿ ಉದ್ಯೋಗವನ್ನು ಮಾಡಿ ಕೊನೆಗೆ ಅವರಿಗೆ ಊರಿಗೆ ಹೋಗಬೇಕಾದ ಸಂದರ್ಭ, ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಬನ್ನೂರು ಅವರ ನೇತೃತ್ವದಲ್ಲಿ ಕಾನೂನಾತ್ಮಕ ಅಡೆತಡೆಗಳನ್ನು ನಿವಾರಿಸಿ ದಾಖಲೆಗಳನ್ನು ಸರಿಪಡಿಸಿ ಪ್ರಯಾಣದ ವ್ಯವಸ್ಥೆಯನ್ನು ಮಾಡಿ ಊರಿಗೆ ಕಳುಹಿಸಿಕೊಡಲಾಯಿತು.
ಕೆಸಿಎಫ್ ನ ಈ ಸಮಾಜಮುಖಿ ಸೇವೆಗಾಗಿ ಮೊಹಮ್ಮದ್ ಅಝರುದ್ದೀನ್ ಹಾಗೂ ಅವರ ಕುಟುಂಬಸ್ಥರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.







