ಅಬುಧಾಬಿ: ಯುಎಇಯಲ್ಲಿ ಸರ್ಕಾರೀ ಪ್ರಾಯೋಜಿತ ಸಂಸ್ಥೆಗಳಲ್ಲಿ ವಾರಾಂತ್ಯದ ರಜಾದಿನಗಳನ್ನು ಶನಿವಾರ ಮತ್ತು ಭಾನುವಾರಗಳಿಗೆ ಬದಲಾಯಿಸಲಾಗಿದೆ. ಸರ್ಕಾರಿ ವಲಯದಲ್ಲಿ ಸೋಮವಾರದಿಂದ ಗುರುವಾರದವರೆಗೆ ಬೆಳಿಗ್ಗೆ 7:30 ರಿಂದ 3:30 ರವರೆಗೆ ಮತ್ತು ಶುಕ್ರವಾರ ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 12 ರವರೆಗೆ ಕೆಲಸದ ಅವಧಿ ಇರಲಿದೆ.
ಶುಕ್ರವಾರ ಮಧ್ಯಾಹ್ನದಿಂದ ಭಾನುವಾರದವರೆಗೆ ರಜೆ ಇರಲಿದೆ. ಹೊಸ ವೇಳಾಪಟ್ಟಿಯು ಜನವರಿ 1, 2022 ರಿಂದ ಜಾರಿಗೆ ಬರಲಿದೆ.
ಫೆಡರಲ್ ಸರ್ಕಾರಿ ಸಂಸ್ಥೆಗಳ ಜೊತೆಗೆ, ದುಬೈ ಮತ್ತು ಅಬುಧಾಬಿಯ ಸರ್ಕಾರಿ ಸಂಸ್ಥೆಗಳು ಸಹ ಕೆಲಸದ ಅವಧಿಯನ್ನು ಹೊಸ ವೇಳಾಪಟ್ಟಿಗೆ ಹೊಂದಿಸುವುದಾಗಿ ಘೋಷಿಸಿವೆ.
ಪ್ರಸ್ತುತ ವಾರಾಂತ್ಯದ ರಜೆಯಾಗಿರುವ ಶುಕ್ರವಾರ ಬೆಳಗ್ಗೆ 7.30ರಿಂದ ಮಧ್ಯಾಹ್ನ 12ರವರೆಗೆ ಕೆಲಸ ಇರಲಿದೆ.ದೇಶದಾದ್ಯಂತ ಎಲ್ಲಾ ಮಸೀದಿಗಳಲ್ಲಿ ಮಧ್ಯಾಹ್ನ 1.15ರಿಂದ ಶುಕ್ರವಾರದ ನಮಾಜು ನಡೆಯಲಿದೆ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡು ಕೆಲಸದ ಸಮಯವನ್ನು ಹೊಂದಿಸಲಾಗಿದೆ. ಶುಕ್ರವಾರದಂದು ಸರ್ಕಾರಿ ನೌಕರರು ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಲಾಗುವುದು ಎಂದು ಹೊಸ ಪ್ರಕಟಣೆಯಲ್ಲಿ ಹೇಳಲಾಗಿದೆ.
ಸದ್ಯ ಸರ್ಕಾರಿ ವಲಯದಲ್ಲಿ ವಾರಕ್ಕೆ ಐದು ದಿನ ಕೆಲಸ ಮಾಡುತ್ತಿದ್ದು, ಮುಂದಿನ ವರ್ಷದ ಆರಂಭದಿಂದ ನಾಲ್ಕೂವರೆ ದಿನಕ್ಕೆ ಇಳಿಕೆಯಾಗಲಿದೆ.
ಸೌದಿ ಅರೇಬಿಯಾದಲ್ಲಿ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ವಾರದ ರಜಾದಿನವನ್ನು ಬದಲಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿಮಾಡಿತ್ತು.







