janadhvani

Kannada Online News Paper

‘ಹಲಾಲ್’ ವಿರುದ್ಧ ಅಭಿಯಾನ- ಕೋಮು ಪ್ರಚೋದನೆಕಾರಿ ವರ್ತನೆ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಕೇರಳ ಮತ್ತು ಇತರ ಕಡೆಗಳಲ್ಲಿ ಮುಸ್ಲಿಮೇತರರು ನಡೆಸುತ್ತಿರುವ ಹಲವು ಹೋಟೆಲ್ಗಳೂ ಎಲ್ಲ ಸಮುದಾಯಗಳ ಗ್ರಾಹಕರನ್ನು ಆಕರ್ಷಿಸಲು ಹಲಾಲ್ ನಾಮಫಲಕಗಳನ್ನು ಬಳಸುತ್ತಿವೆ ಮತ್ತು ಹಲಾಲ್ ಆಹಾರಗಳನ್ನು ಪೂರೈಸುತ್ತಿವೆ.

ಕೋಝಿಕ್ಕೋಡ್: ರೆಸ್ಟೋರಂಟ್ ಗಳಲ್ಲಿ ಹಲಾಲ್ ಪದ್ಧತಿಯನ್ನು ಮತ್ತು ಹಲಾಲ್ ನಾಮಫಲಕಗಳನ್ನು ನಿಷೇಧಿಸುವಂತೆ ಕೇರಳ ಬಿಜೆಪಿಯು ರಾಜ್ಯ ಸರಕಾರವನ್ನು ಆಗ್ರಹಿಸಿದೆ. ಹಲಾಲ್ ತ್ರಿವಳಿ ತಲಾಖ್ ನಂತೆ ಕೆಟ್ಟ ಪದ್ಧತಿಯಾಗಿದೆ ಎಂದು ಕೇರಳ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಪಿ.ಸುಧೀರ್ ಅವರು ರವಿವಾರ ತಿರುವನಂತಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

‌ಸಾಮಾಜಿಕ ಮಾಧ್ಯಮಗಳಲ್ಲಿ ಹಲಾಲ್ ಆಹಾರಗಳನ್ನು ಒದಗಿಸುತ್ತಿರುವ ಹೋಟೆಲ್ ಗಳ ವಿರುದ್ಧ ನಡೆಯುತ್ತಿರುವ ಅಭಿಯಾನ ಮತ್ತು ಆರೆಸ್ಸೆಸ್ ನಂಟು ಹೊಂದಿರುವ ಉದ್ಯಮಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಪ್ರತಿ ಅಭಿಯಾನಗಳ ನಡುವೆಯೇ ಹಲಾಲ್ ಆಹಾರಗಳನ್ನು ನಿಷೇಧಿಸುವಂತೆ ಬಿಜೆಪಿ ಆಗ್ರಹಿಸಿದೆ.

ಈ ನಡುವೆ ರಾಜ್ಯದ ಪ್ರತಿಪಕ್ಷ ನಾಯಕರು ಮತ್ತು ಅಗ್ರ ಹೋಟೆಲ್ ಮಾಲಿಕರ ಒಕ್ಕೂಟ ಕೆಲವು ಹೋಟೆಲ್ ಗಳು ಮತ್ತು ರೆಸ್ಟೋರಂಟ್ ಗಳನ್ನು ಗುರಿಯಾಗಿಸಿಕೊಂಡು ಕೋಮು ಪ್ರಚೋದನೆ ಮತ್ತು ಸುಳ್ಳು ಪ್ರಚಾರದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿಯ 35,000ಕ್ಕೂ ಅಧಿಕ ಹೋಟೆಲ್ ಮತ್ತು ರೆಸ್ಟೋರಂಟ್ ಮಾಲಕರನ್ನು ಪ್ರತಿನಿಧಿಸುವ ಕೇರಳ ಹೋಟೆಲ್ ಮತ್ತು ರೆಸ್ಟೋರಂಟ್ಗಳ ಸಂಘವು ಈಗಾಗಲೇ ಮುಖ್ಯಮಂತ್ರಿಗಳು ಮತ್ತು ಪೊಲೀಸ್ ಮುಖ್ಯಸ್ಥರಿಗೆ ದೂರುಗಳನ್ನು ಸಲ್ಲಿಸಿ,ಕೆಲವು ಹೋಟೆಲ್ಗಳು ಮತ್ತು ರೆಸ್ಟೋರಂಟ್ ಗಳ ವಿರುದ್ಧ ಅಪಪ್ರಚಾರದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದೆ.

ರೆಸ್ಟೋರಂಟ್ ಗಳ ವಿರುದ್ಧ ದ್ವೇಷ ಭಾಷಣ ಮತ್ತು ಕೋಮು ಪ್ರಚೋದನೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಮತ್ತು ಪರಿಣಾಮಕಾರಿ ಕ್ರಮವನ್ನು ಕೈಗೊಳ್ಳುವಂತೆ ರಾಜ್ಯದ ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್ ಆಗ್ರಹಿಸಿದ್ದಾರೆ.

ಪ್ರಸಕ್ತ ವಿವಾದವು ಸಮಾಜವನ್ನು ವಿಭಜಿಸಲು ಆರೆಸ್ಸೆಸ್ನ ಪ್ರಯತ್ನಗಳ ಫಲವಾಗಿದೆ ಎಂದು ಹೇಳಿದ ಆಡಳಿತ ಸಿಪಿಎಂ ಹಿರಿಯ ನಾಯಕ ಕೊಡಿಯೇರಿ ಬಾಲಕೃಷ್ಣನ್ ಅವರು,ಕೋಮುವಾದಿ ಅಭಿಯಾನವು ವಿವಿಧ ಧಾರ್ಮಿಕ ಸಮುದಾಯಗಳ ನಡುವೆ ಧ್ರುವೀಕರಣದ ಉದ್ದೇಶವನ್ನು ಹೊಂದಿದೆ. ಇಂತಹ ಅಪಪ್ರಚಾರ ಕೇರಳ ಸಮಾಜಕ್ಕೆ ಒಳ್ಳೆಯದಲ್ಲ ಮತ್ತು ಅದು ಇಲ್ಲಿ ಯಶಸ್ವಿಯಾಗುವುದಿಲ್ಲ ಎಂದರು.

ಹಿಂದುತ್ವ ಗುಂಪಿನ ಸಮಾಜದಲ್ಲಿ ಒಡಕನ್ನುಂಟು ಮಾಡುವ ಕ್ರಮಗಳು ಇತರ ರಾಜ್ಯಗಳಲ್ಲಿ ‘ಭಯಾನಕ ’ವಾಗಿದ್ದರೆ,ಇತ್ತೀಚಿನ ಬೆಳವಣಿಗೆಗಳು ಕೇರಳದಲ್ಲಿಯೂ ಇಂತಹ ದ್ವೇಷ ಅಭಿಯಾನಗಳು ಆರಂಭಗೊಂಡಿರುವುದನ್ನು ಸೂಚಿಸುತ್ತಿವೆ ಎಂದರು. ಸಾಮಾಜಿಕ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮತ್ತು ಕೆಲವು ಇಸ್ಲಾಮಿಕ್ ಶಬ್ದಗಳ ತಪ್ಪು ವ್ಯಾಖ್ಯಾನದ ಇಂತಹುದೇ ಕೋಮುವಾದಿ ಅಭಿಯಾನಗಳಿಗೆ ಕೇರಳವು ಇತ್ತೀಚಿನ ದಿನಗಳಲ್ಲಿ ಸಾಕ್ಷಿಯಾಗಿದೆ.

ಸಂಘ ಪರಿವಾರ ಶಕ್ತಿಗಳೊಂದಿಗೆ ಕೆಲವು ಕ್ರಿಶ್ಚಿಯನ್ ಗುಂಪುಗಳೂ ಕೇರಳದಲ್ಲಿ ಇಸ್ಲಾಮೋಫೋಬಿಕ್ ಕುರಿತು ಅಪಪ್ರಚಾರವನ್ನು ನಡೆಸುವುದರಲ್ಲಿ ತೊಡಗಿಕೊಂಡಿವೆ. ಸಾಮಾಜಿಕ ಮಾಧ್ಯಮಗಳು ಮತ್ತು ಇತರ ವೇದಿಕೆಗಳ ಮೂಲಕ ದ್ವೇಷವನ್ನು ಹರಡುವವರ ವಿರುದ್ಧ ನಿಷ್ಕ್ರಿಯತೆಗಾಗಿ ರಾಜ್ಯ ಸರಕಾರವನ್ನು ಟೀಕಿಸಿದ ಸತೀಶನ್, ಹಲಾಲ್ ಏನು ಎನ್ನುವುದು ತನಗೆ ಗೊತ್ತಿದೆ, ಈ ಅಪಪ್ರಚಾರವನ್ನು ವಿಫಲಗೊಳಿಸಬೇಕಿದೆ ಎಂದು ಹೇಳಿದರು.

ಹಲಾಲ್ ಆಹಾರಗಳನ್ನು ನಿಷೇಧಿಸಬೇಕೆಂಬ ರಾಜ್ಯ ಬಿಜೆಪಿಯ ಬೇಡಿಕೆಯು ಮುಸ್ಲಿಮರಲ್ಲಿ ಹಲಾಲ್ ಮತ್ತು ಹಲಾಲ್ ಪದ್ಧತಿಗಳ ಪರಿಕಲ್ಪನೆಯ ಕುರಿತು ಅದರ ಅಜ್ಞಾನವನ್ನು ಸೂಚಿಸುತ್ತಿದೆ ಮತ್ತು ಹಲಾಲ್ ಆಹಾರಗಳ ವಿರುದ್ಧ ತನ್ನ ಯುದ್ಧವನ್ನು ಸಮರ್ಥಿಸಿಕೊಳ್ಳಲು ಪಕ್ಷವು ಹೆಣಗಾಡುತ್ತಿದೆ.

ಕೇರಳ ಮತ್ತು ಇತರ ಕಡೆಗಳಲ್ಲಿ ಮುಸ್ಲಿಮೇತರರು ನಡೆಸುತ್ತಿರುವ ಹಲವು ಹೋಟೆಲ್ಗಳೂ ಎಲ್ಲ ಸಮುದಾಯಗಳ ಗ್ರಾಹಕರನ್ನು ಆಕರ್ಷಿಸಲು ಹಲಾಲ್ ನಾಮಫಲಕಗಳನ್ನು ಬಳಸುತ್ತಿವೆ ಮತ್ತು ಹಲಾಲ್ ಆಹಾರಗಳನ್ನು ಪೂರೈಸುತ್ತಿವೆ.