janadhvani

Kannada Online News Paper

ಇರಾನ್ ನಲ್ಲಿ ಪ್ರಬಲ ಭೂಕಂಪನ- ಯುಎಇ ಸೇರಿದಂತೆ ಹಲವು ಅರಬ್ ದೇಶಗಳಲ್ಲೂ ಕಂಪನ

ದುಬೈ, ನ. 14: ಇರಾನ್ ದೇಶದ ದಕ್ಷಿಣ ಭಾಗದಲ್ಲಿ ಭಾನುವಾರ ಸಂಜೆ ರಿಕ್ಟರ್ ಮಾಪಕದಲ್ಲಿ 6.5 ತೀವ್ರತೆಯ ಭೂಕಂಪ ಸಂಭವಿಸಿದೆ. ಇರಾನ್ನ ಹಾರ್ಮೊಜಗನ್ ಪ್ರಾಂತ್ಯದ ಬಂದರ್ ಅಬ್ಬಾಸ್ ನಗರದಿಂದ 47 ಕಿಮೀ ದೂರದಲ್ಲಿ ಹಾಗೂ 10 ಕಿಮೀ ಆಳದಲ್ಲಿ ಈ ಭೂಕಂಪವಾಗಿದೆ.

ಮೊದಲಿಗೆ 6.1 ತೀವ್ರತೆ ಎಂದು ದಾಖಲಾಗಿತ್ತು. ಬಳಿಕ 6.5 ತೀವ್ರತೆಯ ಭೂಕಂಪ ಎಂಬ ವರದಿಗಳು ಬಂದಿವೆ. ಇಷ್ಟು ತೀವ್ರತೆಯ ಭೂಕಂಪವನ್ನು ಪ್ರಬಲ ಭೂಕಂಪ ಎಂದೇ ಪರಿಗಣಿಸಲಾಗುತ್ತದೆ.

ಇರಾನ್ನಲ್ಲಿ ಭೂಕಂಪ ಸಂಭವಿಸಿದರೂ ಸುತ್ತಲಿನ ಅರಬ್ ದೇಶಗಳಲ್ಲಿ ಭೂಮಿ ನಡುಗಿದೆ. ದುಬೈನ ವಿವಿಧ ಪ್ರದೇಶಗಳಾದ ಜುಮೇರಾ ಲೇಕ್ ಟವರ್ಸ್, ನಹದಾ, ದೇರಾ,ಅಲ್ ಬರ್ಶಾ, ದುಬೈ ಇನ್ವೆಸ್ಟ್ಮೆಂಟ್ ಪಾರ್ಕ್, ಡಿಸ್ಕವರಿ ಗಾರ್ಡನ್ಸ್ ಮೊದಲಾದೆಡೆ ಕೆಲ ನಿಮಿಷಗಳವರೆಗೆ ಭೂಮಿ ಕಂಪಸಿದ ಅನುಭವ ಆಯಿತು ಎಂದು ದುಬೈನ ನಿವಾಸಿಗಳು ತಿಳಿಸಿದ್ದಾರೆ.

ಯುಎಇಯ ಇತರ ಪ್ರಾಂತ್ಯಗಳಾದ ಶಾರ್ಜಾ, ಅಬುಧಾಬಿಯಲ್ಲೂ ಭೂಮಿ ಕಂಪಿಸಿರುವುದು ತಿಳಿದುಬಂದಿದೆ.

ಭೂಕಂಪವಾದರೂ ಟಿ20 ವಿಶ್ವಕಪ್ನ ಫೈನಲ್ ಪಂದ್ಯ ನಿಗದಿಯಂತೆ ನಡೆದಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ಯಾವ ಸ್ಪಷ್ಟನೆಯ ಹೇಳಿಕೆಯೂ ಬರಲಿಲ್ಲ.

ಇರಾನ್ನಲ್ಲಿ ಸಂಭವಿಸಿದ ಈ ಭೂಕಂಪದಿಂದ ಪರಿಣಾಮ ಉಂಟಾಗಿರುವುದು ಯುಎಇಯಲ್ಲಿ ಅಷ್ಟೇ ಅಲ್ಲ ಪಾಕಿಸ್ತಾನ್ ದೇಶದವರೆಗೂ ಭೂಮಿಯಲ್ಲಿ ಕಂಪನದ ಅನುಭವಗಳು ಆಗಿರುವುದು ವರದಿಯಾಗಿದೆ. ಬಹ್ರೇನ್, ಸೌದಿ ಅರೇಬಿಯಾ, ಒಮಾನ್, ಕತಾರ್, ಅಫ್ಘಾನಿಸ್ತಾನ್ ಮತ್ತು ಪಾಕಿಸ್ತಾನದಲ್ಲಿ ಕಂಪನಗಳಾಗಿವೆ.

ಇರಾನ್ನ ಬಂದರ್ ಅಬ್ಬಾಸ್ ನಗರದಲ್ಲಿ ಭೂಕಂಪದ ಕಾರಣದಿಂದ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆಂದು ಇರಾನ್ನ ಸ್ಥಳೀಯ ಟಿವಿಗಳ ವರದಿಗಳು ಹೇಳುತ್ತಿವೆ.

error: Content is protected !! Not allowed copy content from janadhvani.com