janadhvani

Kannada Online News Paper

‘ನೋ ಹಲಾಲ್’ ಕೋಮು ದ್ವೇಷ ರೆಸ್ಟೋರೆಂಟ್‌ ಒಡತಿ ತುಷಾರ ಬಂಧನ

ಜಿಹಾದಿಗಳು ತನ್ನ ಮೇಲೆ ದಾಳಿ ಮಾಡಿದ್ದಾರೆ ಎಂದು ಸುಳ್ಳು ಆರೋಪವನ್ನು ಪ್ರಚಾರ ಪಡಿಸಿ ಕೋಮುದ್ವೇಷ ಹರಡಲು ಯತ್ನಿಸಿದ್ದ ತುಷಾರ

ಕೊಚ್ಚಿ : ತನ್ನ ರೆಸ್ಟೋರೆಂಟ್‌ ಮುಂದೆ ‘ಹಲಾಲ್‌ ನಿಷಿದ್ಧ’ ಎಂಬ ಬೋರ್ಡ್‌ ಹಾಕಿದ್ದಕ್ಕೆ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸುಳ್ಳು ಆರೋಪ ಮಾಡಿದ್ದ ತುಷಾರ ಮತ್ತು ಅವರ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ನ. 2 ರಂದು ಇಬ್ಬರನ್ನು ಬಂಧಿಸಲಾಗಿದೆ ಎಂದು ಎರ್ನಾಕುಲಂ ನಗರ ಪೊಲೀಸ್ ಆಯುಕ್ತರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರೆಸ್ಟೋರೆಂಟ್‌ ಮಾಲಿಕತ್ವದ ವಿಚಾರವಾಗಿ ನಡೆದ ಘರ್ಷಣೆಯಲ್ಲಿ ಇಬ್ಬರು ವ್ಯಕ್ತಿಗಳ ಮೇಲೆ ತುಷಾರ ಹಾಗೂ ಸಹಚರರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.ಪರಾರಿಯಾಗಿದ್ದ ತುಷಾರ, ಆಕೆಯ ಪತಿ ಅಜಿತ್ ಮತ್ತು ಆಕೆಯ ಸಹೋದ್ಯೋಗಿ ಅಪ್ಪು ಎಂಬುವವರನ್ನು ಕೊಲೆ ಯತ್ನ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತ ಸಿ ಎಚ್ ನಾಗರಾಜು ಮಂಗಳವಾರ ಖಚಿತಪಡಿಸಿದ್ದಾರೆ.

ಈ ಪ್ರಕರಣದಲ್ಲಿ ಆಕೆಯ ಇಬ್ಬರು ಸಹಚರರಾದ ಅಬಿನ್ ಬೆನ್ಸಸ್ ಆಂಟೋನಿ (22) ಮತ್ತು ವಿಷ್ಣು ಶಿವದಾಸ್ (26) ಅವರನ್ನು ಪೊಲೀಸರು ಭಾನುವಾರ ಬಂಧಿಸಿದ್ದರು.

ತುಷಾರ ತನ್ನ ಎಫ್‌ಬಿ ಪೋಸ್ಟ್‌ನಲ್ಲಿ ಹಲಾಲ್ ಅಲ್ಲದ ಆಹಾರವನ್ನು ನೀಡಿದ್ದಕ್ಕಾಗಿ ಜಿಹಾದಿಗಳು ತನ್ನ ಮೇಲೆ ದಾಳಿ ಮಾಡಿದ್ದಾರೆ ಎಂದು ಸುಳ್ಳು ಆರೋಪವನ್ನು ಪ್ರಚಾರ ಪಡಿಸಿ ಕೋಮುದ್ವೇಷ ಹರಡಲು ಯತ್ನಿಸಿದ್ದರು. ಇದನ್ನು ಕೆಲವು ಸಂಘ ಪರಿವಾರದ ಗುಂಪುಗಳು ಕೈಗೆತ್ತಿಕೊಂಡು ಪ್ರಚಾರ ಪಡಿಸಿದ್ದರು.ಕೇರಳದ ಕೊಚ್ಚಿಯಲ್ಲಿ ಹಲಾಲ್‌ ಮಾಡದ ಆಹಾರ ಪೂರೈಸುವ ರೆಸ್ಟೋರೆಂಟ್‌ ಅನ್ನು ಪ್ರಾರಂಭಿಸಲು ಪ್ರಯತ್ನಿಸಿದ ತುಷರಾ ಅಜಿತ್‌ ಅವರ ಮೇಲೆ ಮುಸ್ಲಿಂ ಸಮುದಾಯದವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಕೆಲವು ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.

ವರದಿಗಳ ಪ್ರಕಾರ ಧಾರ್ಮಿಕ ಕಾರಣಗಳಿಂದ ಯಾವುದೇ ಘರ್ಷಣೆ ನಡೆದಿಲ್ಲ. ಯಾವುದೋ ವಿಷಯವಾಗಿ ವಾದ ವಿವಾದಗಳು ನಡೆದಿದ್ದು ಹೋರಾಟ ಭುಗಿಲೆದ್ದಿದೆ. ಈ ಜಗಳದಲ್ಲಿ ಭಾಗಿಯಾದವರಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಯಾರು ಇಲ್ಲ ಎನ್ನಲಾಗಿದೆ.

ಅಲ್ಲದೇ, ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಕೋಮುದ್ವೇಷ ಹರಡಿದ ಆರೋದಪ ಮೇಲೆ ತುಷಾರ ವಿರುದ್ಧ ಇನ್ಫೋಪಾರ್ಕ್‌ ಪೊಲೀಸರು ಭಾನುವಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತುಷಾರ ಅಜಿತ್‌ ಕಲ್ಲಾಯಿಲ್‌ ಎಂಬುವವರ ಫೇಸ್‌ಬುಕ್‌ ಖಾತೆಯಲ್ಲಿ ‘ಕೋಮು ದ್ವೇಷವನ್ನು ಕೆರಳಿಸುವ ಉದ್ದೇಶದಿಂದ ವೀಡಿಯೋ ಪೋಸ್ಟ್‌ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಪರ್ಯಾಸವೆಂದರೆ, ಈಗಲೂ ಕೆಲವೊಂದು ಸಂಘಪರಿವಾರ ಸಂಘಟನೆಯ ನಾಯಕರು ಈ ನಕಲಿ ವಾರ್ತೆಯನ್ನು ಹಂಚಿ ತಮ್ಮ ವಿಕೃತಿ ಮೆರೆಯುತ್ತಿದ್ದಾರೆ ಎಂಬುದಕ್ಕೆ ಈ ಕೆಳಗಿನ ಟ್ವಿಟರ್ ಪೋಸ್ಟ್ ಸಾಕ್ಷಿ.