ಬೆಂಗಳೂರು,ಅ.29: ಅಕ್ಷರಶಃ ಕನ್ನಡಿಗರ ಕಣ್ಮಣಿಯಾಗಿದ್ದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ವಿಧಿವಶರಾಗಿದ್ದಾರೆ. ಇಂದು ಬೆಳಗ್ಗೆ ಹಠಾರ್ ಹೃದಯಾಘಾತದಿಂದ ಪುನೀತ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಮೊದಲಿನ ಸ್ಥಿತಿಗೆ ತರಲು ವೈದ್ಯರು ತೀವ್ರವಾಗಿ ಪ್ರಯತ್ನಿಸಿದ್ದರು. ಅವರ ಪ್ರಯತ್ನ ವಿಫಲವಾಗಿದೆ. ರಾಜ್ ಕುಟುಂಬದಲ್ಲಿ ದು:ಖದ ವಾತವರಣ ಆವರಿಸಿದೆ. ಅಭಿಮಾನಿಗಳ ಕಣ್ಣಲ್ಲಿ ಕಣ್ಣೀರು ಹರಿದು ಬರುತ್ತಿದೆ. ನೆಚ್ಚಿಕೊಂಡ ಅಪ್ಪು ಇನ್ನಿಲ್ಲ ಎಂಬ ಸುದ್ದಿ ಅರಗಿಸಿಕೊಳ್ಳಲಾಗದಂತಿದೆ. ಅಪ್ಪು ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ನಾಯಕನಾಗಿ ಎಂಟ್ರಿ ಕೊಟ್ಟ ಡಾ ರಾಜ್ ಕೊನೆಯ ಪುತ್ರ ಪುನೀತ್ ರಾಜ್ ಕುಮಾರ್ ಚಿರ ನಿದ್ರೆಗೆ ಜಾರಿದ್ದಾರೆ ಎಂಬುದು ಸ್ಯಾಂಡಲ್ವುಡ್ಗೆ ದೊಡ್ಡ ಆಘಾತ ಉಂಟುಮಾಡಿದೆ.
ದಿವಂಗತ ಡಾ. ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರ ಕೊನೆಯ ಪುತ್ರ ಪುನೀತ್ ರಾಜ್ ಕುಮಾರ್ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಚಿಕ್ಕಂದಿನಿಂದಲೇ ತಂದೆಯೊಂದಿಗೆ ಪರದೆಯ ಮೇಲೆ ಮಿಂಚುವ ಮೂಲಕ ಕನ್ನಡಿಗರಿಗೆ ಅಚ್ಚುಮೆಚ್ಚು ಎನಿಸಿಕೊಂಡರು. ರಾಘವೇಂದ್ರ ರಾಜ್ ಕುಮಾರ್, ಶಿವರಾಜ್ ಕುಮಾರ್ ಅವರ ಪ್ರೀತಿಯ ತಮ್ಮನಾಗಿ ಪುನೀತ್ ರಾಜ್ ಕುಮಾರ್ ಗುರುತಿಸಿಕೊಂಡಿದ್ದರು.
1975ರಲ್ಲಿ ಜನಿಸಿದ ಕನ್ನಡಿಗರ ಅಪ್ಪು ಲೋಹಿತ್ ಎಂಬ ಹೆಸರಿನ ಮೂಲಕ ರಾಜ್ ಕುಟುಂಬದ 5ನೇ ಕುಡಿಯಾಗಿ ಜನಿಸಿದ್ದರು. ಸಿನಿಮಾದ ಮೂಲಕ ಅಪ್ಪು, ಪವರ್ ಸ್ಟಾರ್, ಕನ್ನಡದ ರಾಜರತ್ನ ಎಂಬದು ಅವರಿಗೆ ಮತ್ತು ಅವರ ನಟನೆಗೆ ಸಿಕ್ಕ ಗೌರವ. ಬಾಲ್ಯದಲ್ಲಿಯೇ ನಟನೆಯ ಕೌಶಲ್ಯ ಹೊಂದಿರುವ ಇವರು ರಾಜ್ ಕುಮಾರ್ ಅವರೊಂದಿಗೆ 1980ರಲ್ಲಿ ಮೂಡಿಬಂದ ವಸಂತ ಗೀತೆ ಸಿನಿಮಾದಲ್ಲಿ ಮೊದಲು ನಟಿಸಿದರು.
27 ಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಾಯಕ ನಟನಾಗಿ ಮಿಂಚಿದ್ದ ಪುನೀತ್ ರಾಜ್ ಕುಮಾರ್ ಫಿಟ್ನೆಸ್ ಅಷ್ಟೇ ಒತ್ತು ನೀಡುತ್ತಾ ಬಂದಿದ್ದರು. 46 ವರ್ಷ ವಯಸ್ಸಿನ ಅವರು ಇದ್ದಕ್ಕಿದ್ದಂತೆ ಚಿರನಿದ್ರೆಗೆ ಜಾರಿರುವ ವಿಚಾರ ಸ್ಯಾಂಡಲ್ವುಡ್ಗೆ ದೊಡ್ಡ ನೋವುಂಟು ಮಾಡಿದೆ. ಅನೇಕ ಅಭಿಮಾನಿಗಳು ಅಪ್ಪು ಇನ್ನಿಲ್ಲ ಎಂಬ ಬೇಸರ ತಾಳತಾರದೆ ಕಣ್ಣೀರು ಸುರಿಸುತ್ತಿದ್ದಾರೆ. ನಟ-ನಟಿಯರು ಕೂಡ ಪುನೀತ್ ರಾಜ್ ಅವರ ಹೃದಯಾಘಾತದ ವಿಚಾರದಿಂದ ಶಾಕ್ಗೆ ಒಳಗಾಗಿದ್ದಾರೆ.