ಬೀಜಿಂಗ್,ಅ.22: ಕರೊನಾ ಸೋಂಕನ್ನು ಹತ್ತಿಕ್ಕಲು ಯಶಸ್ವಿಯಾಗಿದ್ದ ಚೀನಾದಲ್ಲಿ ಕಳೆದ ಐದು ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಸೋಂಕು ಪ್ರಕರಣಗಳು ಕಂಡುಬರುತ್ತಿವೆ. ಹೀಗಾಗಿ ಚೀನಾ ಸರ್ಕಾರ ಶಾಲೆಗಳನ್ನು ಮತ್ತು ಪ್ರವಾಸಿ ಸ್ಥಳಗಳನ್ನು ಮುಚ್ಚಿದೆ. ಸಾವಿರಾರು ವಿಮಾನಯಾನಗಳನ್ನು ಕೂಡ ರದ್ದುಗೊಳಿಸಲಾಗಿದೆ ಎನ್ನಲಾಗಿದೆ.
ಪ್ರವಾಸಿಗರ ಗುಂಪಿನಲ್ಲಿ ಪ್ರಯಾಣಿಸುತ್ತಿದ್ದ ಇಳಿವಯಸ್ಸಿನ ಸೋಂಕಿತ ದಂಪತಿಯಿಂದ ಹರಡಿದ ಸೋಂಕಿನಿಂದಾಗಿ ಡಜನ್ಗಟ್ಟಲೆ ಕೊರೊನಾ ಪ್ರಕರಣಗಳು ಉಲ್ಬಣಿಸಿವೆ ಎನ್ನಲಾಗಿದೆ. ಚೀನಾದ ಉತ್ತರ ಮತ್ತು ವಾಯುವ್ಯ ಪ್ರದೇಶಗಳಲ್ಲಿ ಸೋಂಕು ಹರಡಿದ್ದು, ಈ ಪ್ರಾಂತ್ಯಗಳಲ್ಲಿ ಕರೊನಾ ನಿರ್ಬಂಧಗಳನ್ನು ಬಿಗಿಗೊಳಿಸಲಾಗಿದೆ. ದೇಶಾದ್ಯಂತ ಸಾಮೂಹಿಕ ಕರೊನಾ ಪರೀಕ್ಷೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.