ಅರಬ್ ಸಾಮ್ರಾಜ್ಯದ ಮಕ್ಕಾ ನಗರದ ಅಜ್ಞಾನ ಕಾಲದ ಅಂಧಕಾರದ ಮಧ್ಯೆ, ಬೆಳಕಾಗಿ ರಬೀವುಲ್ ಅವ್ವಲ್ ತಿಂಗಳ 12ರಂದು (ಕ್ರಿ.ಶ.571) ಪ್ರವಾದಿ ಮುಹಮ್ಮದ್ ಅವರ ಜನನವಾಗುತ್ತದೆ. ಎಲ್ಲೆಡೆ ಅಧರ್ಮ, ಅನ್ಯಾಯ, ಶೋಷಣೆ ತಾಂಡವಾಡುತ್ತಿದ್ದ ಕಾಲದಲ್ಲಿ ಅಲ್ಲಾಹನ ಸಂದೇಶವಾಹಕರಾಗಿ, ನೈಜ ಇಸ್ಲಾಮಿನ ಸಂದೇಶಗಳನ್ನು ಪ್ರಚುರಪಡಿಸಿ,ಇಸ್ಲಾಮ್ ಧರ್ಮದ ಪೂರ್ಣ ವ್ಯವಸ್ಥೆಯನ್ನು ಮರುಸ್ಥಾಪಿಸಿದರು. ಅವರ ಜನ್ಮದಿನವನ್ನು ಈದ್ ಮಿಲಾದ್ ಅಥವಾ ಮಿಲಾದುನ್ನಬಿ ಹೆಸರಿನಲ್ಲಿ ಆಚರಿಸಲಾಗುತ್ತದೆ.
ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಂ ಅವರನ್ನು ಸರ್ವ ಲೋಕಗಳಿಗೆ ಅನುಗ್ರಹವನ್ನಾಗಿ ಕಳುಹಿಸಲಾಗಿದೆ’ ಎಂದು ಪವಿತ್ರ ಕುರಾನ್ ಹೇಳುತ್ತದೆ. ಅವರು ಮಾನವರಿಗೆ ಮಾತ್ರ ಅನುಗ್ರಹವಲ್ಲ, ಪ್ರಾಣಿ- ಪಕ್ಷಿಗಳಿಗೂ, ಸಸ್ಯ- ಲತಾದಿಗಳಿಗೂ ಅನುಗ್ರಹವಾಗಿದ್ದಾರೆ. ತಮ್ಮ ಪ್ರೀತಿ, ಮಮತೆ ಮತ್ತು ಶಾಂತಿಯ ಸಂದೇಶಗಳ ಮೂಲಕ ಒಂದು ಸಮಗ್ರ ಜೀವನ ವ್ಯವಸ್ಥೆಯನ್ನು ಸ್ಥಾಪಿಸಿ, ಅದನ್ನು ಇಡೀ ಜಗತ್ತಿಗೆ ಪಸರಿಸಿರುವ ಅದ್ಭುತ ಸಂತನಾಗಿ ಗುರುತಿಸಿಕೊಂಡಿದ್ದಾರೆ.
ಇಂದಿನ ಆಧುನಿಕ ಜಗತ್ತು ಕೂಡಾ ಮೇಲು- ಕೀಳು ಎಂಬ ವರ್ಗೀಯ, ಜನಾಂಗೀಯ ಅಸಮಾನತೆ, ಲಿಂಗ ತಾರತಮ್ಯಗಳ ಮೂಲಕ ಶೋಷಣೆ ಮಾಡುತ್ತಿದೆ. ಅದು ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದೆ. ಕ್ರಿಸ್ತ ಶಕ ಆರನೇ ಶತಮಾನದಲ್ಲೇ ಇಂಥ ಎಲ್ಲ ರೀತಿಯ ಅಸಮಾನತೆಗಳನ್ನು ತೊಡೆದು ಹಾಕಿ ಶೋಷಣೆ ಮುಕ್ತ ಸಮಾಜ ನಿರ್ಮಾಣ ಮಾಡಿರುವ ಮಹಾನ್ ನಾಯಕನಾಗಿ ಪ್ರವಾದಿ ಮುಹಮ್ಮದ್ ಗಮನ ಸೆಳೆಯುತ್ತಾರೆ.
ಇಸ್ಲಾಮಿನ ಪ್ರಕಾರ, ಒಬ್ಬ ಪ್ರವಾದಿ(ಆದಮ್)ಯೇ ಜಗತ್ತಿನ ಪ್ರಥಮ ಪುರುಷ. ಜಗತ್ತು ದಾರಿ ತಪ್ಪಿದಾಗಲೆಲ್ಲಾ ಇಂಥ ಒಬ್ಬೊಬ್ಬ ಪ್ರವಾದಿಗಳು ಬಂದಿದ್ದಾರೆ. ಅವರ ಸಂಖ್ಯೆ ಒಂದು ಲಕ್ಷಕ್ಕಿಂತಲೂ ಹೆಚ್ಚು. ಆ ಪೈಕಿ, ಪ್ರವಾದಿ ಮುಹಮ್ಮದ್ ಸ. ಅ. ಕೊನೆಯವರು. ಅವರ ನಂತರ ಬೇರೊಬ್ಬ ಪ್ರವಾದಿ ಬರಲಾರರು. ಹಾಗಾಗಿ ಅವರ ಸಂದೇಶ ಒಂದು ಪ್ರದೇಶ ಅಥವಾ ನಿರ್ದಿಷ್ಟ ಅವಧಿಗೆ ಸೀಮಿತವಾಗಿರದೆ, ಇಡೀ ಜಗತ್ತಿಗೆ ಮತ್ತು ಲೋಕಾಂತ್ಯದವರೆಗೂ ಮುಂದುವರಿಯಲಿದೆ.
ಸ್ತ್ರೀ ಸಂಕಟ ವಿಮೋಚಕ: ಹೆಣ್ಣು ಮಗು ಹುಟ್ಟುವುದೇ ಶಾಪ, ಕಳಂಕ ಎಂಬಂತಿದ್ದ ಕಾಲವದು. ಹೆಣ್ಣು ಮಗು ಎಲ್ಲರಂತೆ ಇರುವ ಮನುಷ್ಯ ಜೀವಿ. ಅದನ್ನು ಪ್ರೀತಿಯಿಂದ ಸಾಕಿ ಸಲಹಿ, ಉತ್ತಮ ಶಿಕ್ಷಣ ನೀಡಿ ಬೆಳೆಸುವುದೇ ನಿಮ್ಮ ಮೋಕ್ಷದ ದಾರಿ ಎಂದು 1492 ವರ್ಷಗಳ ಹಿಂದೆಯೇ ಸಾರಿದವರು ಪ್ರವಾದಿ ಮುಹಮ್ಮದ್. ತಾರತಮ್ಯ ಇಲ್ಲದೆ ಹೆಣ್ಮಕ್ಕಳಿಗೂ ಶಿಕ್ಷಣ ಕೊಡಿ. ಆಸ್ತಿಯಲ್ಲಿ ಆಕೆಗೂ ಕಡ್ಡಾಯವಾಗಿ ಪಾಲು ಕೊಡಿ ಎಂದು ಸಾರಿದವರು ಪ್ರವಾದಿ.ವಧುದಕ್ಷಿಣೆ ಹೆಣ್ಣಿನ ಹಕ್ಕೆಂದು ಪ್ರತಿಪಾದಿಸಿದ್ದಲ್ಲದೆ, ತಾಯಿಯ ಪಾದದಡಿ ಸ್ವರ್ಗವಿದೆ ಎಂಬ ಮಾತಿನ ಮೂಲಕ ಸ್ತ್ರೀ ಸಮೂಹಕ್ಕೆ ಗೌರವ ತಂದುಕೊಟ್ಟರು.
ಧಾರ್ಮಿಕ ಸಹಿಷ್ಣುತೆ: ಧರ್ಮದ ವಿಷಯದಲ್ಲಿ ಜನರನ್ನು ಪೀಡಿಸುತ್ತಿದ್ದ, ಶೋಷಿಸುತ್ತಿದ್ದ ಕಾಲದಲ್ಲಿ, ಜಗತ್ತಿನಲ್ಲಿ ಯಾರೂ ಯಾರಿಗೂ ದಾಸರಲ್ಲ. ಯಾರೂ ಮೇಲು- ಕೀಳಲ್ಲ. ದೇವಭಯ ಮತ್ತು ಸಚ್ಚಾರಿತ್ರ್ಯ ಇದ್ದವರು ಮಾತ್ರ ಶ್ರೇಷ್ಠರು ಎನ್ನುವ ಮೂಲಕ ಆಗಿನ ಅರಬರು, ಅರಬೇತರರಿಗಿಂತ ಶ್ರೇಷ್ಠರು ಎಂಬ ತಾರತಮ್ಯವನ್ನು ಹೊಸಕಿ ಹಾಕಿದರು. ಪ್ರವಾದಿಯ ಆಪ್ತರಾಗಿದ್ದ ಅಬೂದರ್ರ್ ಗಿಫ್ಫಾರಿ ಎಂಬವರು ಇಥಿಯೋಪಿಯಾದ ಗುಲಾಮ ಬಿಲಾಲ್ ಬಿನ್ ರಬಾಹ ಅವರನ್ನು ಕರಿಯನ ಮಗನೇ ಎಂದು ಮೂದಲಿಸಿದನ್ನು ತಿಳಿದು, ಕ್ಷಮೆ ಯಾಚಿಸಲು ಹೇಳಿದ್ದರು. ಮುಂದೆ ಮಕ್ಕಾ ವಿಜಯದ ಬಳಿಕ ಇದೇ ಕರಿಯ ಗುಲಾಮ ಬಿಲಾಲ್ ಅವರನ್ನು ಪವಿತ್ರ ಕಾಬಾ ಭವನದ ಮೇಲೆ ಹತ್ತಿಸಿ ಪ್ರಾರ್ಥನೆಗೆ ಕರೆ ಅಝಾನ್ ನೀಡುವ ಜವಾಬ್ದಾರಿ ಕೊಟ್ಟರು.
ಪ್ರವಾದಿ ಮುಹಮ್ಮದ್ ಕೇವಲ ಧರ್ಮ ಗುರು ಅಥವಾ ಸಮಾಜ ಸುಧಾರಕರಾಗಿರದೆ, ಆಡಳಿತಗಾರ, ದಂಡ ನಾಯಕ, ವ್ಯಾಪಾರಿ, ತತ್ವಜ್ಞಾನಿ, ರಾಜಕಾರಣಿ, ವಾಗ್ಮಿ, ಅನಾಥ ರಕ್ಷಕ, ಗುಲಾಮರ ವಿಮೋಚಕ, ಸ್ತ್ರೀ ವಿಮೋಚಕ, ಕಾನೂನು ತಜ್ಞ, ನ್ಯಾಯಾಧೀಶ, ಒಳ್ಳೆಯ ಪತಿ, ಶ್ರೇಷ್ಠ ತಂದೆಯಾಗಿ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ತಾನು ಬೋಧಿಸಿದ್ದನ್ನು ಸ್ವತಃ ಆಚರಿಸಿಕೊಂಡು ಒಂದು ಮಾದರಿ ಸಮಾಜ ನಿರ್ಮಿಸಿದ್ದಾರೆ. ಎಲ್ಲರಿಗೂ ಆಪ್ತರಾಗಿದ್ದ ಪ್ರವಾದಿ ಅವರ ಮುಗುಳ್ನಗು, ಸವಿನುಡಿಗಳೇ ಹೆಗ್ಗುರುತಾಗಿತ್ತು. ತನ್ನನ್ನು ಪೀಡಿಸಿದವರನ್ನು ಕ್ಷಮಿಸಿದರು. ಪ್ರೀತಿಯಿಂದ ಸಮಾಜವನ್ನು ತಿದ್ದಿ ತೀಡಿ ಬೆಳೆಸಿದರು. ಪ್ರೀತಿ ಎಲ್ಲವನ್ನೂ ಸೋಲಿಸುತ್ತದೆ, ಸಹಿಸುತ್ತದೆ ಮತ್ತು ಕ್ಷಮಿಸುತ್ತದೆ ಎಂಬಂತೆ ಅವರು ಮಾಡಿದ ಕ್ರಾಂತಿಯು ಇಡೀ ಜಗತ್ತನ್ನು ಗೆದ್ದಿದೆ.