janadhvani

Kannada Online News Paper

ಹಾವು ಕಚ್ಚಿಸಿ ಕೊಲೆ: ಅತ್ಯಂತ ಅಪರೂಪದ ಪ್ರಕರಣದಲ್ಲಿ ಸೂರಜ್‌ ದೋಷಿ

ಪತ್ನಿಯನ್ನೇ ನಾಗರಹಾವು ಕಚ್ಚಿಸಿ ಕೊಲೆ ಮಾಡಿಸಿದ ಆರೋಪ ದಲ್ಲಿ ಪತಿ ಸೂರಜ್‌ ಎಸ್‌.ಕುಮಾರ್‌ ದೋಷಿ

ಕೊಲ್ಲಂ: ಕೇರಳ ಸೇರಿದಂತೆ ದೇಶಾದ್ಯಂತ ಕುತೂಹಲ ಕೆರಳಿಸಿದ್ದ ಉತ್ತರಾ ಕೊಲೆ ಪ್ರಕರಣದಲ್ಲಿ ಪತಿಯನ್ನು ದೋಷಿ ಎಂದು ಕೊಲ್ಲಂನ ಹೆಚ್ಚುವರಿ ಸೆಷನ್ಸ್‌ ಕೋರ್ಟ್‌ ಸೋಮವಾರ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ಅ.13ರಂದು ಪ್ರಕಟಿಸಲಾಗುತ್ತದೆ ಎಂದು ನ್ಯಾಯಾಧೀಶ ಮನೋಜ್‌ ಎಂ. ಹೇಳಿದ್ದಾರೆ.

ಪತ್ನಿಯನ್ನೇ ನಾಗರಹಾವು ಕಚ್ಚಿಸಿ ಕೊಲೆ ಮಾಡಿಸಿದ ಆರೋಪ ದಲ್ಲಿ ಪತಿ ಸೂರಜ್‌ ಎಸ್‌.ಕುಮಾರ್‌ನನ್ನು ಬಂಧಿಸಲಾಗಿದೆ. ಆತನ ವಿರುದ್ಧ ಸಾಕ್ಷ್ಯನಾಶ, ವಿಷ ಪ್ರಾಶನ ಆರೋಪಗಳನ್ನು ಹೊರಿಸ ಲಾಗಿದೆ. ದೋಷಿ ಎಂದು ನ್ಯಾಯಾಧೀಶ ಮನೋಜ್‌ ಎಂ ಅವರು ಆದೇಶ ಪ್ರಕಟಿಸುವ ಸಂದರ್ಭದಲ್ಲಿ ಆರೋಪಿ ಕೂಡ ಕೋರ್ಟ್‌ ನಲ್ಲಿ ಹಾಜರಿದ್ದ.

ಅತ್ಯಂತ ಅಪರೂಪದ ಪ್ರಕರಣದಲ್ಲಿ ಸೂರಜ್‌ ಪತ್ನಿ ಉತ್ತರಾ (25) ಅವರನ್ನು ನಾಗರಹಾವು ಕಚ್ಚಿಸಿ ಕೊಲೆ ಮಾಡಿಸಿದ್ದ. 2020ರ ಮೇ 7ರಂದು ಉತ್ತರಾ ಸಂಶಯಾಸ್ಪದವಾಗಿ ಅಸುನೀಗಿದ್ದರು. ಸಂಶಯಗೊಂಡ ಉತ್ತರಾ ತಾಯಿ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಸಂಶಯದಿಂದ ಸೂರಜ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಹಾವು ಕಚ್ಚಿಸಿ ಕೊಲೆ ಮಾಡಿದ್ದ ಬಗ್ಗೆ ತಪ್ಪೊಪ್ಪಿಕೊಂಡಿದ್ದ.

ಸೋಮವಾರ ಬೆಳಗ್ಗೆ ಕೊಲ್ಲಂ ಎಡಿಶನಲ್ ಸೆಶನ್ಸ್ ಕೋರ್ಟಿನಲ್ಲಿ ಕಿಕ್ಕಿರಿದು ಜನರು ತುಂಬಿದ್ದರು. ಅತ್ತ ಉತ್ತರಾ ಕುಟುಂಬಸ್ಥರು, ಸೂರಜ್ ಸ್ನೇಹಿತರು, ಆತನ ಮನೆಯವರು, ಮತ್ತೊಂದು ಕಡೆ ಪ್ರಕರಣದ ಬಗ್ಗೆ ಕುತೂಹಲದಿಂದ ಬಂದಿದ್ದವರು, ಪೊಲೀಸರು ಹೀಗೆ ಕೋರ್ಟ್ ಹಾಲ್ ಮತ್ತು ಅದರ ಆವರಣದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಆರೋಪಿ ಸೂರಜ್ ನನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ತಂದು ನ್ಯಾಯಾಧೀಶರ ಮುಂದೆ ನಿಲ್ಲಿಸಿದರು. ನಿಂಗೇನಾದ್ರೂ ಕೇಳೋಕೆ ಅಥವಾ ಹೇಳೋಕೆ ಇದ್ಯಾ ಎಂದು ನ್ಯಾಯಾಧೀಶರು ಸೂರಜ್ ಬಳಿ ಕೇಳಿದರು. ಆತ, ನಂಗೇನೂ ಹೇಳೋಕಿಲ್ಲ ಅಂತಾ ತಲೆಯನ್ನು ಅಲ್ಲಾಡಿಸಿದ.

ಪ್ರಾಸಿಕ್ಯೂಟರ್ ಜಿ.ಮೋಹನರಾಜ್, ಅತ್ಯಂತ ಅಪರೂಪದ ಮತ್ತು ಅತ್ಯಂತ ಹೇಯ ಕೃತ್ಯ ಎಸಗಿದ ಪ್ರಕರಣ. ಆರೋಪಿಗೆ ಗಲ್ಲು ಶಿಕ್ಷೆಯನ್ನೇ ಜಾರಿಗೊಳಿಸಬೇಕೆಂದು ಜಡ್ಜ್ ಬಳಿ ಕೇಳಿಕೊಂಡರು. ಕೆಲವು ನಿಮಿಷಗಳ ಕೋರಿಕೆ ಆಲಿಸಿದ ನ್ಯಾಯಾಧೀಶರು, ಆರೋಪಿ ಸೂರಜ್ ನನ್ನು ಪ್ರಕರಣದಲ್ಲಿ ದೋಷಿ ಎಂದು ತೀರ್ಪಿತ್ತರಲ್ಲದೆ, ಶಿಕ್ಷೆಯ ಪ್ರಮಾಣವನ್ನು ಅ.13ರಂದು ನೀಡುವುದಾಗಿ ಘೋಷಿಸಿದರು.

ಪತ್ನಿಗೆ ನಿದ್ದೆ ಮಾತ್ರೆಗಳನ್ನು ಕೊಟ್ಟು ಹಾವು ಬಿಡುತ್ತಿದ್ದ

ಅತ್ಯಂತ ಅಪರೂಪದ ಪ್ರಕರಣ ಆಗಿತ್ತು. ಸಾಮಾನ್ಯವಾಗಿ ಯಾರನ್ನಾದರೂ ಕೊಲ್ಲುವುದಕ್ಕೆ ಆಯುಧಗಳನ್ನು ಬಳಸುತ್ತಾರೆ. ಅಥವಾ ವಿಷ ಇನ್ನಿತರ ವಸ್ತುಗಳನ್ನು ಬಳಸುತ್ತಾರೆ. ಇಲ್ಲಿ ಆರೋಪಿ ಯೂಟ್ಯೂಬಲ್ಲಿ ಸರ್ಚ್ ಮಾಡಿ, ಹಾವುಗಳ ಬಗ್ಗೆ ಅಧ್ಯಯನ ಮಾಡಿದ್ದ. ಹಾವನ್ನು ಕಚ್ಚಿಸಿ ಕೊಂದರೆ, ಯಾವುದೇ ಸಂಶಯ ಬರುವುದಿಲ್ಲ ಎಂದು ಸಂಚು ನಡೆಸಿದ್ದ. ಹಾವನ್ನು ಬಿಡುವುದಕ್ಕೂ ಮುನ್ನ ಆಕೆಗೆ ನಿದ್ದೆ ಮಾತ್ರೆಗಳನ್ನು ಕೊಡುತ್ತಿದ್ದ. ಕನ್ನಡಿ ಹಾವು ಕಚ್ಚಿದ ಬಳಿಕ ಆಕೆಗೆ ನಡೆದಾಡಲು ಸಾಧ್ಯವಾಗಿರಲಿಲ್ಲ. 52 ದಿನಗಳ ಕಾಲ ಬೆಡ್ಡಿನಲ್ಲೇ ಇದ್ದಳು. ಇದೇ ಸಂದರ್ಭದಲ್ಲಿ ಮತ್ತೊಂದು ಹಾವನ್ನು ತಂದು ಅತ್ಯಂತ ಹೇಯ ರೀತಿಯಲ್ಲಿ ಕೊಲ್ಲಿಸಿದ್ದಾನೆ ಎಂದು ಕೊಲ್ಲಂ ಎಸ್ಪಿ ಹರಿಹರನ್ ಅಂದು ಹೇಳಿದ್ದರು.

ಉತ್ತರಾ ಜೊತೆಗೆ ಮದುವೆಯ ಬಳಿಕ ನಿರಂತರ ಹಣಕ್ಕಾಗಿ ಆಕೆಯ ಮನೆಯವರನ್ನು ಪೀಡಿಸುತ್ತಿದ್ದ. ಪ್ರತೀ ಬಾರಿಯೂ ಆಕೆ ಹೆತ್ತವರು ಹಣ ಕೊಡುತ್ತಿದ್ದರು. ಯಾವಾಗ ಹಣ ಕೊಡುವುದನ್ನು ನಿಲ್ಲಿಸಿದರೋ, ಈಕೆಯನ್ನು ಕೊಲ್ಲಲು ಪತಿಯೇ ಪ್ಲಾನ್ ಹಾಕಿದ್ದ. ಹಾವನ್ನು ಕಚ್ಚಿ ಕೊಂದರೆ, ಸಹಜ ಸಾವು ಎನ್ನುವಂತೆ ಬಿಂಬಿಸಲು ಪ್ಲಾನ್ ಮಾಡಿದ್ದ. ಇದಕ್ಕಾಗಿ ಕೆಲವು ತಿಂಗಳ ಹಿಂದಿನಿಂದಲೇ ಇಂಟರ್ನೆಟ್ಟಿನಲ್ಲಿ ಹುಡುಕಾಡಿದ್ದ ಎಂದು ತನಿಖೆ ನಡೆಸಿದ ಡಿವೈಎಸ್ಪಿ ಅಶೋಕ್ ಹೇಳಿದ್ದರು. ಆತನ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ), 307 (ಕೊಲೆ ಪ್ರಯತ್ನ), 328 ( ವಿಷ ಉಣಿಸಿದ್ದು) ಮತ್ತು 201 (ಸಾಕ್ಷ್ಯ ನಾಶ) ಅಡಿ ಪ್ರಕರಣ ದಾಖಲಿಸಿ, ಕೋರ್ಟಿನಲ್ಲಿ ಅಪರಾಧ ಸಾಬೀತು ಮಾಡಿದ್ದೇ ರೋಚಕ.

ಹಳೆ ಕೇಸ್ ಸ್ಟಡಿ ಮಾಡಿದ್ದ ಕೊಲ್ಲಂ ಪೊಲೀಸರು

ಪ್ರತ್ಯಕ್ಷ ಸಾಕ್ಷಿ ಇಲ್ಲದ ಇಂತಹ ಪ್ರಕರಣಗಳಲ್ಲಿ ಅಪರಾಧ ಸಾಬೀತು ಪಡಿಸುವುದು ಪೊಲೀಸರಿಗೆ ಕಷ್ಟವಾಗಿರುತ್ತದೆ. ಹೀಗಾಗಿ ಈ ಮಾದರಿಯಲ್ಲಿ ನಡೆದಿರುವ ಪ್ರಕರಣಗಳನ್ನು ಕೊಲ್ಲಂ ಪೊಲೀಸರು ಅಧ್ಯಯನ ನಡೆಸಿದ್ದರು. ಮಧ್ಯಪ್ರದೇಶದ ಇಂದೋರ್ ಮತ್ತು ಮಹಾರಾಷ್ಟ್ರದ ನಾಗಪುರದಲ್ಲಿ ಇದೇ ರೀತಿ ಹಾವನ್ನು ಕಚ್ಚಿಸಿ ಕೊಂದಿದ್ದ ಪ್ರಕರಣ ನಡೆದಿತ್ತು.

2011ರಲ್ಲಿ ನಾಗಪುರದಲ್ಲಿ ಯುವಕನೊಬ್ಬ ತನ್ನ ತಂದೆ ಮತ್ತು ಮಲತಾಯಿಯನ್ನು ಹಾವನ್ನು ಕಚ್ಚಿಸಿ ಕೊಂದ ಪ್ರಕರಣ ಮತ್ತು 2019ರಲ್ಲಿ ಪತಿಯೇ ಪತ್ನಿಯನ್ನು ನಿದ್ದೆ ಮಾತ್ರೆ ಕೊಟ್ಟು ಹಾವನ್ನು ಕಚ್ಚಿಸಿದ ಪ್ರಕರಣ. ಎರಡು ಪ್ರಕರಣದಲ್ಲಿಯೂ ಪೊಲೀಸರ ತಪ್ಪಿನಿಂದಾಗಿ ಕೋರ್ಟಿನಲ್ಲಿ ಕೇಸ್ ಪ್ರೂವ್ ಆಗಿರಲಿಲ್ಲ. ಇವೆರಡು ಪ್ರಕರಣಗಳಲ್ಲಿ ಆಗಿರುವ ಪ್ರಮಾದಗಳ ಬಗ್ಗೆ ಸ್ಟಡಿ ಮಾಡಿ, ಉತ್ತರಾ ಕೊಲೆ ಪ್ರಕರಣದಲ್ಲಿ ಹೇಗೆ ಕೃತ್ಯ ನಡೆದಿತ್ತು ಅನ್ನೋದನ್ನು ಡಮ್ಮಿ ಪೀಸ್ ಇಟ್ಟು ಹಾವಿನಿಂದ ಕಚ್ಚಿಸಿ, ವಿಡಿಯೋ ಚಿತ್ರೀಕರಣ ಮಾಡಿದ್ದರು. ಅದನ್ನೂ ಕೋರ್ಟಿನಲ್ಲಿ ಸಾಕ್ಷ್ಯವಾಗಿ ತೋರಿಸಿದ್ದು ಪೊಲೀಸರ ಹೆಚ್ಚುಗಾರಿಕೆ.

error: Content is protected !! Not allowed copy content from janadhvani.com