janadhvani

Kannada Online News Paper

ಕೇರಳ: ಎಸ್ಸೆಸ್ಸೆಫ್ ರಾಜ್ಯಮಟ್ಟದ ಪ್ರತಿಭೋತ್ಸವಕ್ಕೆ ಚಾಲನೆ

ರಾಷ್ಟ್ರದ ಹಲವೆಡೆಗಳಲ್ಲಿ ಅನೈಕ್ಯತೆಯನ್ನುಂಟು ಮಾಡುವ ಯತ್ನಗಳು ನಡೆಯುತ್ತಿವೆ. ಜನರನ್ನು ಮಂಕು ಮರಳು ಮಾಡಿ ಒಂದು ಧರ್ಮದ ಅನುಯಾಯಿಗಳ ವಿರುದ್ಧ ಸೆಟೆದು ನಿಲ್ಲುವಂತೆ ಮಾಡುವ ಕುಟಿಲ ತಂತ್ರಗಳೂ ವ್ಯಾಪಕವಾಗಿ ನಡೆಯುತ್ತಿವೆ. ಇವುಗಳನ್ನು ಪ್ರಜಾಪ್ರಭುತ್ವ ಜಾತ್ಯಾತೀತ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಮಟ್ಟಹಾಕಬೇಕೆಂದು ಕೇರಳ ಬಂದರು ಸಚಿವ ಅಹ್ಮದ್ ದೇವರ್ ಕೋವಿಲ್ ಹೇಳಿದರು.ಎಸ್ ಎಸ್ ಎಫ್ ಆಯೋಜಿಸುವ 28ನೆಯ ಕೇರಳ ಪ್ರತಿಭೋತ್ಸವವನ್ನು ಉದ್ಘಾಟಿಸುತ್ತಾ ಅವರು ಮಾತನಾಡಿದರು.

ಸ್ವಾತಂತ್ರ್ಯ ಸಮರ ಸಂಘಟನೆಗಳನ್ನು ಸೋಲಿಸಲು ದೇಶದ ಒಳಗೂ ಹೊರಗೂ ಪ್ರಯತ್ನಗಳು ನಡೆದಿವೆ. ಅನೈಕ್ಯವನ್ನುಂಟು ಮಾಡಿ ಸ್ವಾತಂತ್ರ್ಯವೆಂಬ ಬಯಕೆಯನ್ನು ಇಲ್ಲವಾಗಿಸಲು ಬ್ರಿಟಿಷರು ಪ್ರಯತ್ನಪಟ್ಟರು. ಅದರ ಫಲವೆಂಬಂತೆ ಭಾರತ ಸ್ವತಂತ್ರಗೊಂಡ ನಂತರವೂ ದೇಶ ವಿಭಜನೆಗೊಂಡಿತು. ಬ್ರಿಟಿಷರ ಅನೈಕ್ಯತೆ ಶ್ರಮದಲ್ಲಿ ನಾವು ಸೋತು ಹೋದುದಕ್ಕೆ ಅಪಾರ ಬೆಲೆಯನ್ನು ನಾವು ತೆರಬೇಕಾಯಿತು.ಪ್ರಸ್ತುತ ಸನ್ನಿವೇಶದಲ್ಲಿ ಸ್ಥಾಪಿತ ಹಿತಾಸಕ್ತಿಗಳು ನಡೆಸುವ ವಿಭಜನಾ ಬಲೆಯಲ್ಲಿ ಬೀಳದೆ ನಮ್ಮನ್ನು ನಾವೇ ಕಾಪಾಡಬೇಕೆಂದೂ ಅವರು ಸೂಚಿಸಿದರು.

ಎಸ್ ಎಸ್ ಎಫ್ ರಾಜ್ಯ ಕಾರ್ಯದರ್ಶಿ ಹಾಮಿದಲಿ ಸಖಾಫಿ ಪಾಲಾಝಿ ಅಧ್ಯಕ್ಷತೆ ವಹಿಸಿದ್ದರು. ಕೇರಳ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ವಂಡೂರ್ ಅಬ್ದುಲ್ ರಹ್ಮಾನ್ ಫೈಝಿ, ಸಿ ಪಿ ಸೈದಲವಿ ಮಾಸ್ಟರ್, ಪ್ರೊಫೆಸರ್ ಎ ಕೆ ಅಬ್ದುಲ್ ಹಮೀದ್, ಕೆ ವೈ ನಿಝಾಮುದ್ದೀನ್ ಫಾಳಿಲಿ, ಸಿ.ಎನ್ ಜಅಫರ್, ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್ ಕಾಸರಗೋಡ್, ಮುಹಮ್ಮದ್ ಕಿನಾಲೂರ್ ಮುಂತಾದವರು ಭಾಷಣಗೈದರು.

ಅಕ್ಟೋಬರ್ 2ರ ತನಕ ನಡೆಯುವ ಕೇರಳ ಪ್ರತಿಭೋತ್ಸವದಲ್ಲಿ ಮುಂದಿನ ದಿನಗಳಲ್ಲಿ ವಿವಿಧ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಡಿಜಿಟಲ್ ವೇದಿಕೆಯಲ್ಲಾಗಿದೆ ಕೇರಳ ಪ್ರತಿಭೋತ್ಸವ ನಡೆಯುವುದು. ಸಮಾರೋಪ ಸಮಾರಂಭವನ್ನು ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಉದ್ಘಾಟಿಸುವರು.