ಪುತ್ತೂರು:(ಜನಧ್ವನಿ ವಾರ್ತೆ) ಮರ್ಕಝುಲ್ ಹುದಾ ಮಹಿಳಾ ಕಾಲೇಜು ಕುಂಬ್ರ..!
ಸಂಸ್ಥೆಯ ಕುರಿತು ಪರಿಚಯಿಸಿಕೊಡಬೇಕಾದ ಅಗತ್ಯನೇ ಇಲ್ಲ. ಯಾಕಂದರೆ ಮರ್ಕಝ್ ಸಮುದಾಯದ ನಡುವೆ ಸೃಷ್ಟಿಸಿದ ಕ್ರಾಂತಿಯ ಅಲೆಗಳು ಅಪಾರವಾದದ್ದು. ಮರ್ಕಝ್ ಪೋಷಿಸಿದ ಅರಿವಿನ ಪ್ರಭೆಗಳು ಇಂದು ರಾಜ್ಯದಗಲವಾಗಿ ಹಲವು ಮಹಿಳಾ ಕಾಲೇಜುಗಳಲ್ಲಿ ಮಾರ್ಗದರ್ಶಕರಾಗಿ ಸಮುದಾಯದ ಅಭಿಮಾನವಾಗಿ ಗುರುತಿಸಲ್ಪಡುತ್ತಿದ್ದಾರೆ.
ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಶರೀಅತ್ ಪದವಿ ಪೂರ್ತಿಗೊಳಿಸಿದ ಆಲಿಮಾತ್ ಗಳಿಗೆ ” ಅಲ್ ಮಾಹಿರಾ” ( ಕೌಶಲ್ಯವನ್ನು ಹೊಂದಿದವಳು) ಬಿರುದು ಪ್ರದಾನ ಕಾರ್ಯಕ್ರಮದ ದಿನಾಂಕವು ಪ್ರಕಟಗೊಂಡ ನಂತರ ಕುಂಬ್ರದ ಆಸುಪಾಸು ಹಾಗೂ ಪುತ್ತೂರಿನ ಸಂಘಟನಾ ಕಾರ್ಯಕರ್ತರಿಗೆ ವಿಶ್ರಾಂತಿಯಿಲ್ಲದ ದಿನಗಳಾಗಿದ್ದವು. ಅದರಲ್ಲೂ ಕುಂಬ್ರದ ಆಸುಪಾಸಿನ ಬಹುತೇಕ ಕಾರ್ಯಕರ್ತರಿಗೆ ನಿದ್ದೆಯಿಲ್ಲದ ಬಹುತೇಕ ರಾತ್ರಿಗಳಾಗಿದ್ದವು. ಕಾರ್ಯಕ್ರಮದ ದಿನಗಳು ಹತ್ತಿರ ಬರುತ್ತಿರುವಂತೆಯೇ ಕಾರ್ಯಕ್ರಮದ ಸಿದ್ಧತೆಗಳು ಇನ್ನಷ್ಟು ವೇಗವನ್ನು ಪಡೆದುಕೊಳ್ಳಲಾರಂಬಿಸಿದವು. ಮರ್ಕಝ್ ನ ಇಸ್ಮಾಯಿಲ್ ಹಾದಿ ತಂಙಳ್ , ಝೈನಿ ಉಸ್ತಾದ್ ಸೇರಿದಂತೆ ಇತರ ಸಾರಥಿಗಳು, ಸ್ವಾಗತ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ವಿಗಾಗಿ ನಿರಂತರ ಯೋಜನೆಗಳನ್ನು ಕೈಗೆತ್ತಿಕೊಂಡಾಗ ಇರುವ ದಿನಗಳು ಬೆರಳಣಿಕೆಯದ್ದು ಮಾತ್ರವಾದ ಕಾರಣ ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲೇಬೇಕಾದ ಒತ್ತಡಗಳು ಸಂಘಟಕರಲ್ಲಿದ್ದವು.
ಯಾವುದೇ ಕಾರ್ಯಕ್ರಮ ಯಶಸ್ವಿಯಾಗಿ ಮುನ್ನೇರಬೇಕಾದರೆ ಅಲ್ಲೊಂದು ಯುವ ಪಡೆ ಅವಿಶ್ರಾಂತವಾಗಿ ಕಾರ್ಯಕ್ರಮದ ಯಶಸ್ಸಿಗಾಗಿ ದುಡಿಯಬೇಕಾಗುತ್ತದೆ. ಅಂತಹ ಒಂದು ಯುವ ಪಡೆಯನ್ನು ಕಟ್ಟಿ ಬೆಳೆಸಬೇಕಾದದ್ದು ಸಾಹಸವೇ ಆಗಿದ್ದರೂ ಸಂಘ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಆವೇಶವನ್ನು ನೀಡಬಲ್ಲ ಉಮರಾ ನಾಯಕ ಅರಿಯಡ್ಕ ಅಬ್ದುಲ್ ರಹಿಮಾನ್ ಹಾಜಿ ಕಾರ್ಯಕ್ರಮದ ಯಶಸ್ವಿಗಾಗಿ ತನ್ನ ಮನೆಯ ಸಮೀಪದ ಸಭಾಂಗಣದಲ್ಲಿ ಒಂದು ಸಭೆ ಸೇರಿಸಿ ಕುಂಬ್ರ ಆಸುಪಾಸಿನ ಸಂಘಟನಾ ಕಾರ್ಯಕರ್ತರಿಗೆ ಸಮ್ಮೇಳನದ ಯಶಸ್ಸಿಗಾಗಿ ದುಡಿಯಲು ಯಾವಾಗ ಆಹ್ವಾನ ನೀಡುತ್ತಾರೋ ಅದರೊಂದಿಗೆ ಯುವಕರಲ್ಲಿ ಅದೇನೋ ಒಂದು ರೀತಿಯ ಆವೇಶದ ಚಿಗುರು ಮೊಳಕೆಯೊಡೆಯತೊಡಗಿತು. ಹಿರಿಯರು, ಕಿರಿಯರು ಅನ್ನುವ ಭೇದ, ಭಾವವಿಲ್ಲದೆ ಎಲ್ಲರೂ ತಮ್ಮನ್ನು ತಾವು ಸಂಪೂರ್ಣವಾಗಿ ಒಂದೊಂದು ವಿಭಾಗವನ್ನು ಒಬ್ಬೊಬ್ಬರಿಗೆ ವಹಿಸಿಕೊಂಡು ಅದರ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಲು ಸೂಚಿಸಲಾಗುತ್ತದೆ. ಸ್ವಾಗತ ಸಮಿತಿಯಲ್ಲಿ ವಹಿಸಿದ ಜವಾಬ್ದಾರಿಗಳನ್ನು ಕೆಲವರು ವಹಿಸಿಕೊಂಡಿದ್ದರೆ, ಮರ್ಕಝ್ ಸಮ್ಮೇಳನದ ಸಂಭ್ರಮವನ್ನು ಸಡಗರವನ್ನಾಗಿಸುವ ಜವಾಬ್ದಾರಿಗಳನ್ನು ಇನ್ನು ಕೆಲವರು ವಹಿಸಿಕೊಂಡಿದ್ದರು.
ಒಟ್ಟಾರೆಯಾಗಿ ಸಮ್ಮೇಳನದ ಪ್ರಚಾರ ವ್ಯಾಪಕವಾಗಿ ಹರಡತೊಡಗಿದವು. ಕುಂಬ್ರ ಪೇಟೆಯಾದ್ಯಂತ ಇಂದೆಂದೂ ಕಾಣದ ರೀತಿಯಲ್ಲಿ ಎಸ್ಸೆಸ್ಸಫ್ ನ ತ್ರಿವರ್ಣ ಪತಾಕೆಗಳಿಂದ ಕಂಗೊಳಿಸುತ್ತಾ ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಹೃದಯ ಭಾಗವಾದ ಕುಂಬ್ರದಲ್ಲಿ ಮರ್ಹೂಂ ಮಮ್ಮುಂಞಿ ಹಾಜಿ ಹಾಗೂ ಮರ್ಹೂಂ ಉಸ್ಮಾನ್ ಹಾಜಿಯ ಹೆಸರಿನಲ್ಲಿ ಮರ್ಕಝ್ ಸಮ್ಮೇಳನದ ದ್ವಾರಗಳು ಜನರನ್ನು ಪ್ರೀತಿಯಿಂದ ಆಹ್ವಾನಿಸುವ ರೂಪದಲ್ಲಿತ್ತು.
ಇನ್ನೇನು ಮಾರ್ಚ್ 31 ರ ಶನಿವಾರದ ಆ ಶುಭ ದಿನದಂದು ಕುಂಬ್ರ ಪರಿಸರ ಹಾಗೂ ಪುತ್ತೂರು ತಾಲ್ಲೂಕಿನ ಬಹುತೇಕ ಸುನ್ನೀ ಕಾರ್ಯಕರ್ತರಿಗೆ ಹಬ್ಬದಂತಾಗಿತ್ತು. ಬೆಳಿಗ್ಗೆ ಬೇಗನೇ ಮರ್ಕಝ್ ಆವರಣದೊಳಗೆ ತಮ್ಮ ಇರುವಿಕೆಯನ್ನು ತೋರ್ಪಡಿಸಿದ ಸ್ವಯಂ ಸೇವಕರು ತಮ್ಮ ತಮ್ಮ ಜವಾಬ್ದಾರಿಗಳತ್ತ ಮುಂದುವರಿಯುತ್ತಿದ್ದರೂ ಸ್ವಯಂ ಸೇವಕರಾಗಿ ಸಹಕರಿಸಲು ಬರುತ್ತಿದ್ದ ಕಾರ್ಯಕರ್ತರ ಸಂಖ್ಯೆ ಕೊನೆಗೊಳ್ಳುತ್ತಲೇ ಇರಲಿಲ್ಲ. ಬೆಳಗ್ಗಿನ ಕಾರ್ಯಕ್ರಮ ಮಹಿಳೆಯರಿಗೆ ಮಾತ್ರ ಸೀಮಿತವಾದ ಕಾರ್ಯಕ್ರಮವಾಗಿರುವುದರಿಂದ ಜನಪ್ರವಾಹದ ರೂಪದಲ್ಲಿ ಮಹಿಳೆಯರು ಆಗಮಿಸುತ್ತಲೇ ಇದ್ದರು.
ಎರಡೂವರೆ ಸಾವಿರದಷ್ಟು ಆಸನದ ವ್ಯವಸ್ಥೆಗಳು ಮಾಡಿದ್ದರೂ ಗಂಟೆ ಹತ್ತಾಗುವಷ್ಟರಲ್ಲಿ ಬಹುತೇಕ ಅದು ಬರ್ತಿಯಾಗಿದ್ದವು.
ಮಹಿಳೆಯರ ಕಡೆ ಸಂಪೂರ್ಣವಾಗಿ ಎಲ್ಲಾ ವಿಭಾಗವನ್ನು ನಿಯಂತ್ರಿಸಲು ಶರೀಅತ್ ಕಾಲೇಜಿನಲ್ಲಿ ಕಲಿಯುತ್ತಿರುವ ನೂರರಷ್ಟು ಸ್ವಯಂ ಸೇವಕರನ್ನು ಮಾರ್ಗದರ್ಶನ ನೀಡಿ ರೆಡಿ ಮಾಡಲಾಗಿತ್ತು.
ಅವರನ್ನು ಸ್ವಾಗಿಸುವುದರೊಂದಿಗೆ, ಅವರಿಗೆ ತಂಪು ಪಾನೀಯವನ್ನು ನೀಡುವುದರೊಂದಿಗೆ ,ಅವರಿಗೆ ಆಸನದ ವ್ಯವಸ್ಥೆ , ಇನ್ನಿತರ ರೂಪದಲ್ಲಿ ಸಹಾಯ ಮಾಡಲು ಮಹಿಳಾ ಸ್ವಯಂ ಸೇವಕರು ಸೇವೆಗೈಯುತ್ತಿದ್ದರು.
ಸಂಘಟಕರ ನಿರೀಕ್ಷೆಯೂ ಮೂರು ಸಾವಿರದಷ್ಟು ಮಹಿಳೆಯರು ಸೇರಬಹುದೆಂಬುದಾಗಿತ್ತು. ಆದರೆ ಗಂಟೆ ಹನ್ನೆರಡಾದರೂ ಮಹಿಳೆಯರು ಮಾತ್ರ ಪ್ರವಾಹದ ರೂಪದಲ್ಲಿ ಗುಂಪು ಗುಂಪಾಗಿ ಬರುತ್ತಲೇ ಇದ್ದರು. ಮೂವತ್ತರಷ್ಟು ಯುವಕರು ಟ್ರಾಫಿಕ್ ನಿಯಂತ್ರಿಸುತ್ತಿದ್ದರೂ ಇತ್ತ ಕುಂಬ್ರ ಪೇಟೆಯಿಂದ ಹಿಡಿದು ಅತ್ತ ಶೇಖಮಲೆ ಮಸೀದಿಯಿಂದ ಸ್ವಲ್ಪ ದೂರದಲ್ಲಿನ ಸಮತಟ್ಟಾದ ಮೈದಾನದಲ್ಲಿ ಬಸ್ ಗಳ ಪಾರ್ಕಿಂಗಿಗೆ ಸ್ಥಳಾವಕಾಶ ಮಾಡಲಾಗಿತ್ತಾದರೂ ಅಲ್ಲೆಲ್ಲಾ ವಾಹನಗಳು ತುಂಬಿ, ಪರಿಸರದ ಬಹುತೇಕ ಮನೆಗಳ ಅಂಗಳಗಲಲ್ಲೂ ವಾಹನಗಳ ಸಂಖ್ಯೆ ತುಂಬಿ ಹೋಗಿತ್ತು. ಸುಡು ಬಿಸಿಲಿನ ಮಧ್ಯೆಯೂ ಟ್ರಾಫಿಕ್ ನಿಯಂತ್ರಿಸುತ್ತಾ ಕಾರ್ಯನಿರ್ವಹಿಸುತ್ತಿದ್ದ ಯುವಕರ ಉತ್ಸಾಹ ಒಂದು ಕಡೆಯಾಗಿದ್ದರೆ, ಸುಮಾರು ಅರುವತ್ತರಷ್ಟು ಸೇವಕರು ಊಟವನ್ನು ಪ್ಯಾಕ್ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡು ತಮ್ಮ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು. ಮೂರು ಸಾವಿರದಷ್ಟು ಪ್ಯಾಕ್ ಗಳು ತಯಾರು ಮಾಡಿದಾಗ ಬಂದು ಸೇರಿರುವ ಮಹಿಳೆಯರ ಸಂಖ್ಯೆ ಐದು ಸಾವಿರದ ಸಮೀಪವಾಗಿತ್ತು. ಮತ್ತೂ ಮತ್ತೂ ಮಹಿಳೆಯರ ದಂಡು ಆಗಮಿಸುತ್ತಲೇ ಇರುವುದನ್ನು ಮನಗಂಡ ಸಂಘಟಕರು ಮಾತ್ರ ಹೈರಾಣಾಗಿದ್ದರು. ಮುಂದೇನು ಅಂತ ಯೋಚಿಸದೆ ಮತ್ತೆ ಒಂದೂವರೆ ಸಾವಿರಷ್ಟು ಮಂದಿಗೆ ಊಟ ತಯಾರಿಸಲು ಹೇಳಿಯಾಗಿತ್ತು. ತ್ವರಿತವಾಗಿ ಊಟ ತಯಾರಿಸಿದಾಗ ಗಂಟೆ ಬಹುತೇಕ ಒಂದನ್ನು ಸಮೀಪಿಸಿಯಾಗಿತ್ತು. ಉತ್ಸಾಹದ ಚಿಲುಮೆಯಂತೆ ಸ್ವಯಂ ಸೇವಕರಾಗಿದ್ದುಕೊಂಡು ಸಹಕರಿಸುತ್ತಿದ್ದ ಕಾರ್ಯಕರ್ತರ ಉತ್ಸಾಹ ಬತ್ತಿ ಹೋಗಲೇ ಇಲ್ಲ. ಮಧ್ಯಾಹ್ನದ ಸಮಯದಲ್ಲೇ ಪುರುಷರ ಸಂಖ್ಯೆಯೂ ಅಧಿಕಗೊಳ್ಳತೊಡಗಿದಂತೆ ಇತ್ತ ಪುರುಷರಿಗಾಗಿ ಮೀಸಲಿರಿಸಿದ ವೇದಿಕೆಯಲ್ಲಿ ಎಡಪ್ಪಾಳ ಉಸ್ತಾದ್, ವಳವೂರು ಉಸ್ತಾದ್ , ಮುಂತಾದ ಹಲವಾರು ಉಸ್ತಾದರಿಂದ ಉಪನ್ಯಾಸಗಳು ನಡೆಯುತ್ತಾ ಇದ್ದವು.
ಅತ್ತ ಕಡೆ ಮಹಿಳಾ ವೇದಿಕೆಯಲ್ಲಿ ಅಲ್ ಮಾಹಿರಾ ಬಿರುದು ಪ್ರದಾನ ಕಾರ್ಯಕ್ರಮದ ಬಳಿಕ ಅತ್ಯತ್ತಮವಾದ ಕೌಟುಂಬಿಕ ತರಗತಿಗಳು ನಡೆಯುತ್ತಾ ಇತ್ತು. ಅದೇ ಸಂದರ್ಭದಲ್ಲಿ ಪುತ್ತೂರಿನ ಶಾಸಕಿಯವರು ತನ್ನ ಖಾಸಗಿ ಕಾರ್ಯಕ್ರಮದ ನಿಮಿತ್ತ ಅದೇ ರಸ್ತೆಯಲ್ಲಿ ಸಂಚರಿಸುವಾಗ ವಾಹನದ ಸಾಲುಗಳನ್ನು ನೋಡಿ ಕಾರ್ಯಕ್ರಮದ ಮಾಹಿತಿಯನ್ನರಿತು ಆಗಮಿಸಿ , ಕಾರ್ಯಕ್ರಮದಲ್ಲಿ ಸೇರಿರುವ ಜನಸಮೂಹವನ್ನು ನೋಡಿ ಆಶ್ಚರ್ಯಗೊಂಡು , ಶುಭಹಾರೈಸಿ ತೆರಳಿದರು.
ಅದಾಗಲೇ ಮಹಿಳೆಯರ ಆಸನಗಳು ಪೂರ್ತಿಗೊಂಡು , ಕಾಲಿಡಲು ಜಾಗವಿಲ್ಲದ ರೂಪದಲ್ಲಿ ಮಹಿಳೆಯರು ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರೆ, ಬಹುತೇಕ ವಿದ್ಯಾರ್ಥಿನಿ ಕೊಠಡಿಗಳು ಅದಾಗಲೇ ತುಂಬಿಹೋಗಿತ್ತು. ಯಾರಿಗೂ ತೊಂದರೆಯಾಗದ ರೂಪದಲ್ಲಿ ಮಹಿಳಾ ಸ್ವಯಂ ಸೇವಕರು ಕಾರ್ಯಕ್ರಮವನ್ನು ನಿಯಂತ್ರಿಸುತ್ತಿದ್ದರು. ಅವರಿಗೆ ಬೇಕಾದಾಗ ನೀರು ವಿತರಣೆ, ತಂಪು ಪಾನೀಯ ವಿತರಣೆ, ಸಣ್ಣ ಮಕ್ಕಳಿಗೆ ಬೇಕಾದಾಗ ಬಿಸ್ಕಟ್ ವಿತರಣೆ ಮಾಡುತ್ತಲೇ ಇದ್ದರು.
ಒಂದು ಕಡೆ ಸುಡು ಬಿಸಿಲು ,ಮಗದೊಂದು ಕಡೆ ಹಸಿವಿನ ದಾಹದಿಂದ ಇದ್ದ ಮಹಿಳೆಯರ ಉತ್ಸಾಹ ಮಾತ್ರ ಕಡಿಮೆಯಾಗಿರಲಿಲ್ಲ. ಊಟ ಇನ್ನೇನು ವಿತರಿಸಬೇಕೆನ್ನುವಷ್ಟರಲ್ಲಿ ಅದಕ್ಕಾಗಿಯೇ ಮೀಸಲಿರಿಸಿದ ಮಹಿಳಾ ಸ್ವಯಂ ಸೇವಕರು ಯಶಸ್ವಿಯಾಗಿ ತಮ್ಮ ದೌತ್ಯವನ್ನು ನೆರವೇರಿಸುತ್ತಿದ್ದರು. ಸರಿಸುಮಾರು ಐದು ಸಾವಿರದಷ್ಟು ಮಂದಿಗೆ ಊಟ ವಿತರಿಸಿದರೂ , ಸಾವಿರಾರು ಮಹಿಳೆಯರು ಕೊನೆಗೆ ಊಟ ಸಿಗದೆ ನಿರಾಸೆಯಿಂದ ಮರಳಬೇಕಾಯಿತು. ಸಂಘಟಕರ ಲೆಕ್ಕಾಚಾರಗಳೆಲ್ಲಾ ಬುಡಮೇಲುಗೊಂಡಿದ್ದರೂ ಆ ಸಮಯದಲ್ಲಿ ಮಾತ್ರ ಅಸಹಾಯಕತೆಯಿಂದ ನೋಡಬೇಕಾದ ಅನಿವಾರ್ಯತೆಗೊಳಪಟ್ಟರು.
ಸಾರ್ವಜನಿಕ ಸಮ್ಮೇಳನದ ಮುಖ್ಯಪ್ರಭಾಷಣಗಾರರಾಗಿ ಆಗಮಿಸುವ ಸುಲ್ತಾನುಲ್ ಉಲಮಾರವರನ್ನು ಭವ್ಯವಾಗಿ ಸ್ವಾಗತಿಸಲು ಅದಾಗಲೇ ಒಂದು ತಂಡ ಸಿದ್ಧತೆಯಲ್ಲಿ ತಯಾರಾಗುತ್ತಿತ್ತು. ಬೆಳಗ್ಗಿನಿಂದ ಸ್ವಯಂ ಸೇವಕರಾಗಿ ದುಡಿಯುತ್ತಿದ್ದರೂ ಒಂದಿಷ್ಟೂ ಆಯಾಸಗೊಳ್ಳದವರಂತೆ ಉತ್ಸಾಹದಿಂದ ಊಟನೂ ಮಾಡದೆ ಉಸ್ತಾದರನ್ನು ಸ್ವಾಗತಿಸಲು ಶ್ವೇತ ವಸ್ತ್ರಧಾರಿಗಳಾಗಿ ತಯಾರಾಗಿನಿಂತ ಕಾರ್ಯಕರ್ತರ ಮುಖದಲ್ಲಿ ಅದೇನೋ ಒಂದು ರೀತಿಯಲ್ಲಿ ಮಂದಹಾಸದ ನಗು ಭಾಸವಾಗುತ್ತಿತ್ತು.
ಇಕ್ಬಾಲ್ ಬಪ್ಪಳಿಗೆಯವರ ನೇತೃತ್ವದಲ್ಲಿ ಸುನ್ನೀ ದ ಅವಾ ವಿಂಗ್ ನ ಆ ಕಾರ್ಯಕರ್ತರು ನಿರೀಕ್ಷೆಗೂ ಮೀರಿ ಆಗಮಿಸಿದ್ದರು. ಪ್ರತಿಯೋರ್ವರಲ್ಲೂ ಉಸ್ತಾದರನ್ನು ಸ್ವಾಗತಿಸಲು ಬೇಕಾದ ಹುಮ್ಮಸ್ಸು ಅಡಗಿದಂತಿತ್ತು. ಉಸ್ತಾದ್ ಇನ್ನೇನು ಆಗಮಿಸಿದರು ಅನ್ನುವಾಗ ಕುಂಬ್ರ ಇಂದೆಂದೂ ಕಂಡರಿಯದ ಅಭೂತಪೂರ್ವ ಜನಪ್ರವಾಹವು ಕಾಣಿಸಿತು. ಶಿಸ್ತಿನ ಸಿಪಾಯಿಗಳಂತೆ ಕಾರ್ಯಕರ್ತರ ನಡಿಗೆ , ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವ ಮುಯೀನುದ್ದೀನ್ ಬೆಂಗಳೂರು ರವರ ಅತ್ಯಾಕರ್ಷಕ ನಾತ್ ಹಾಗೂ ಹಾಡು ಅದೇನೋ ಹೊಸ ಕಲೆಯೊಂದಕ್ಕೆ ಕುಂಬ್ರವನ್ನು ಕಂಗೊಳಿಸುವಂತೆ ಮಾಡಿ , ಮರ್ಕಝ್ ಸನದುದಾನ ಕಾರ್ಯಕ್ರಮವನ್ನು ಐತಿಹಾಸಿಕಗೊಳಿಸಿದವು. ಅದರಲ್ಲೂ ಉಸ್ತಾದರನ್ನೂ ಸ್ವಾಗತಿಸುತ್ತಾ ತ್ರಿವರ್ಣ ಪತಾಕೆಗಳನ್ನು ಹಿಡಿದು ಶ್ವೇತ ವಸ್ತ್ರಧಾರಿಗಳಾಗಿ ಸಂಚರಿಸಿದ ಕಾರ್ಯಕರ್ತರ ಆವೇಶ, ಹುಮ್ಮಸ್ಸು ಜನರೆಡೆಯಲ್ಲಿ ಚರ್ಚಿಸುವಂತೆ ,ಅಭಿಮಾನಪಡುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.
ಎಪಿ ಉಸ್ತಾದರ ಭಾಷಣವನ್ನು ಆಳಿಸಲು ಸಾವಿರಾರು ಮಂದಿ ಆಗಮಿಸಿದ್ದರು.
ಕಾರ್ಯಕ್ರಮ ಮುಗಿದೊಡನೆಯೇ ಕುಂಬ್ರದ ಆಸುಪಾಸು ಹಾಕಿದ್ದ ಬಂಟಿಂಗ್ಸ್ , ಫ್ಲೆಕ್ಸ್ , ನೀರಿನ ಬಾಟಲಿಗಳನ್ನು ತೆಗೆದು ಕಾರ್ಯಕ್ರಮದ ಸಂಘಟಕರು ಊರವರ ಹಾಗೂ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾದರು.
ಕಾರ್ಯಕ್ರಮದ ಸಂಘಟಿಸುವಲ್ಲಿ ಯಶಸ್ವಿಯಾಗಿ ಹಗಲಿರುಳೂ ವಿಶ್ರಾಂತಿಯಲ್ಲದೆ ಓಡಾಡಿದ ಝೈನಿ ಉಸ್ತಾದ್ , ಯೂಸುಫ್ ಹಾಜಿ ಗೌಸಿಯಾ, ಅರಿಯಡ್ಕ ಅಬ್ದುಲ್ ರಹಿಮಾನ್ ಹಾಜಿ, ಖಾಸಿಂ ಹಾಜಿ ಮಿತ್ತೂರು, ಮರ್ಕಝ್ ಮ್ಯಾನೇಜರ್ ಅಲಿ ಸ ಅದಿ,ಕರೀಂ ಹಾಜಿ ಚೆನ್ನಾರ್,
ಕಾರ್ಯಕ್ರಮದುದ್ದಕ್ಕೂ ಪ್ರತಿಯೊಂದು ರೂಪದಲ್ಲೂ ಕಾರ್ಯಕರ್ತರಿಗೆ ಆವೇಶ ತುಂಬುತ್ತಿದ್ದ ಯುವ, ಭರವಸೆಯ ನಾಯಕರಾದ ಆಶಿಕುದ್ದೀನ್ ಅಖ್ತರ್, ಎಸ್. ಬಶೀರ್ ಹಾಜಿ, ಶಾಕಿರ್ ಹಾಜಿ, ಎಸ್.ಪಿ ಬಶೀರ್, ಎ.ಕೆ ಇಸುಬು, ಕಾರ್ಯಕ್ರಮದ ಯಶಸ್ಸಿನ ಹಿಂದೆ ಬೆನ್ನೆಲುಬುಗಳಾಗಿ ದುಡಿದ ಎಸ್ಸೆಸ್ಸಫ್, ಎಸ್ ವೈ ಎಸ್ ಕುಂಬ್ರ ಸೆಕ್ಟರ್ ಹಾಗೂ ಪುತ್ತೂರು ಡಿವಿಶನ ವ್ಯಾಪ್ತಿಯ ಪ್ರತೀ ಯುನಿಟ್ ಹಾಗೂ ಸುನ್ನೀ ದ ಅವಾ ವಿಂಗ್ ಕಾರ್ಯಕರ್ತರ ಪರಿಶ್ರಮಗಳು ಅಕ್ಷರಗಳಲ್ಲಿ ಒಪ್ಪಿಸಿ ಬಿಡುವಂತದಲ್ಲ.
ಕುಂಬ್ರದ ಇತಿಹಾಸದಲ್ಲೇ ನವ ಚರಿತ್ರೆಗಳಿಗೆ ಮುನ್ನುಡಿ ಬರೆದ ಈ ಕಾರ್ಯಕ್ರಮದ ಹಿಂದೆ ದುಡಿದ ಎಲ್ಲಾ ವ್ಯಕ್ತಿತ್ವಗಳಿಗೂ ಅಲ್ಲಾಹು ತಕ್ಕುದಾದ ಪ್ರತಿಫಲವನ್ನು ನೀಡಿ ಅನುಗ್ರಹಿಸಲಿ.
ಮರ್ಕಝುಲ್ ಹುದಾ ಮಹಿಳಾ ಕಾಲೇಜು ಸಮುದಾಯದ ಬೆಳಕಾಗಿ ಸಮಾಜವನ್ನು ಬೆಳಗಿಸುವಂತಾಗಲಿ ಅನ್ನುವ ಹಾರೈಕೆ, ಪ್ರಾರ್ಥನೆ ಯೊಂದಿಗೆ…
ಸ್ನೇಹಜೀವಿ ಅಡ್ಕ.
Masha Allah