janadhvani

Kannada Online News Paper

ಕೋವಿಡ್ ಫಲಿತಾಂಶ ಕೋವಿನ್ ವೆಬ್‌ಸೈಟ್ ನಲ್ಲೇ ಲಭ್ಯ- ಶೀಘ್ರದಲ್ಲೇ ಜಾರಿ

ನವದೆಹಲಿ: ಕೋವಿಡ್ ಪರೀಕ್ಷಾ ಫಲಿತಾಂಶಗಳನ್ನು ಲಸಿಕೆ ಪ್ರಮಾಣಪತ್ರಗಳಂತೆಯೇ ಕೋವಿನ್ ವೆಬ್‌ಸೈಟ್‌ಗೆ ಲಿಂಕ್ ಮಾಡಲಾಗುವುದು ಎಂದು ಕೇಂದ್ರ ಹೇಳಿದೆ. ಇದರೊಂದಿಗೆ, ಡಿಜಿಟಲ್ ಸಹಿಯೊಂದಿಗೆ ಆರ್‌ಟಿಪಿಸಿಆರ್ ಪರೀಕ್ಷಾ ಫಲಿತಾಂಶವನ್ನು ಕೋವಿನ್ ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು.ಈ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯಸ್ಥ ಆರ್ ಎಸ್ ಶರ್ಮಾ ಹೇಳಿದ್ದಾರೆ.

ಪ್ರಸ್ತುತ ಹೆಚ್ಚಿನ ದೇಶಗಳಿಗೆ ಪ್ರಯಾಣಿಸಲು 48, 72 ಅಥವಾ 96 ಗಂಟೆಗಳ ಮುಂಚಿತವಾಗಿ ತೆಗೆದುಕೊಂಡ RTPCR ಪರೀಕ್ಷಾ ಫಲಿತಾಂಶಗಳು ಕಡ್ಡಾಯವಾಗಿದೆ. ಈ ಸಂದರ್ಭದಲ್ಲಿ, ಹೊಸ ವ್ಯವಸ್ಥೆಯು ವಲಸಿಗರಿಗೆ ಸಹಾಯಕರವಾಗಲಿದೆ.

ಅದೇ ಸಮಯದಲ್ಲಿ, ಕೋವಿನ್ ವೆಬ್‌ಸೈಟ್ ಅನ್ನು ಲಸಿಕೆ ಪೋರ್ಟಲ್ ಎಂದು ಅನೇಕ ದೇಶಗಳು ಅಂಗೀಕರಿಸದಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಶರ್ಮಾ ಹೇಳಿದರು. ಡಿಜಿಟಲ್ ಲಸಿಕೆ ಪ್ರಮಾಣಪತ್ರವನ್ನು ಡಿಜಿಟಲ್ ಪಾಸ್‌ಪೋರ್ಟ್‌ ಆಗಿ ಅನುಮೋದಿಸಲು ಹಲವಾರು ಪ್ರಯತ್ನಗಳು ನಡೆದಿವೆ ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಯುತ್ತಿದೆ. ಅಂತರರಾಷ್ಟ್ರೀಯ ಗುಣಮಟ್ಟದಲ್ಲೇ ಭಾರತ ಲಸಿಕೆ ಪಾಸ್‌ಪೋರ್ಟ್ ನ್ನು ಸಜ್ಜೀಕರಿಸಿದೆ ಎಂದು ಶರ್ಮಾ ಹೇಳಿದರು.