janadhvani

Kannada Online News Paper

ನಾಳೆಯಿಂದ ಶಾಲಾ-ಕಾಲೇಜು ಆರಂಭ- ಸಿದ್ಧತೆ ಪೂರ್ಣ

ಬೆಂಗಳೂರು,ಆ. 22: ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ನಾಳೆಯಿಂದ (ಆ.23) ಶಾಲೆ ಕಾಲೇಜು ಪುನರ್ ಆರಂಭಕ್ಕೆ ಈಗಾಗಲೇ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. 9 ಮತ್ತು 10ನೇ ತರಗತಿ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ಆರಂಭಕ್ಕೆ ಸರ್ಕಾರ ಕೂಡ ಎಲ್ಲಾ ಸಿದ್ದತೆ ನಡೆಸಿದ್ದು, ಯಾವುದೇ ಆತಂಕವಿಲ್ಲದೇ ವಿದ್ಯಾರ್ಥಿಗಳು ಶಾಲಾ- ಕಾಲೇಜಿಗೆ ಬರುವಂತೆ ತಿಳಿಸಿದೆ.

ಕೊರೊನಾ ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ ತೆರೆಯಲು ಅನುಮತಿ ನೀಡಲಾಗಿದೆ. ಶೇ.2 ಕ್ಕಿಂತ ಹೆಚ್ಚು ಪಾಸಿಟಿವಿಟಿ ದರವಿರುವ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಸದ್ಯಕ್ಕೆ ಶಾಲಾ ಆರಂಭವಿಲ್ಲ.

ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರ ತರಬೇಕಿರುವುದು ಕಡ್ಡಾಯವಾಗಿದೆ. ಶಾಲೆಗೆ ಆಗಮಿಸುವ ಶಿಕ್ಷಕರು ಮತ್ತು ಸಿಬ್ಬಂದಿಗಳು ಮೊದಲ ಡೋಸ್ ಲಸಿಕೆ ಪಡೆದಿರುವುದು ಕಡ್ಡಾಯವಾಗಿದೆ. ಭೌತಿಕ ತರಗತಿಗೆ ಹಾಜರಾಗುವುದು ಕಡ್ಡಾಯವಾಗಿಲ್ಲವಾದರೂ, ಎಲ್ಲಾ ವಿದ್ಯಾರ್ಥಿಗಳು ಹಾಜರಾಗುವಂತೆ ಮನವಿ ಮಾಡಲಾಗಿದೆ.

ಈ ಸಂಬಂಧ ಈಗಾಗಲೇ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದ್ದು, ಎಲ್ಲಾ ಮುಂಜಾಗ್ರತಾ ಕ್ರಮವಹಿಸುವಂತೆ ಸೂಚನೆ ನೀಡಲಾಗಿದೆ.ವಾರದ ಐದು ದಿನಗಳಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ತನಕ ಹಾಗೂ ಶನಿವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 12.50 ರ ವರೆಗೆ ತರಗತಿಗಳು ನಡೆಯಲಿದೆ.

ಶಾಲಾ-ಕಾಲೇಜು ಆರಂಭವಾಗುತ್ತಿರುವ ಹಿನ್ನಲೆ ವಿದ್ಯಾರ್ಥಿಗಳಿಗೆ ಸಂಚಾರ ವ್ಯವಸ್ಥೆಯಲ್ಲಿ ತೊಂದರೆಯಾಗದಂತೆ ಸಾರಿಗೆ ಇಲಾಖೆ ಕೂಡ ವ್ಯವಸ್ಥೆ ಮಾಡಿದೆ. ವಿದ್ಯಾರ್ಥಿಗಳು ತಮ್ಮ ಹಳೆಯ ಬಸ್ ಪಾಸ್ ಮೂಲಕವೇ ಸಂಚಾರಕ್ಕೆ ಬಿಎಂಟಿಸಿ ಅವಕಾಶ ಮಾಡಿಕೊಟ್ಟಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಬಿಎಂಟಿಸಿ ಇದೇ 23ರಿಂದ‌ 9 ರಿಂದ 12ನೇ ತರಗತಿ ಶಾಲಾ‌-ಕಾಲೇಜು ಆರಂಭಗೊಳ್ಳುತ್ತಿದೆ. ಈ ಹಿನ್ನೆಲೆ‌ ಹಳೆಯ ಸ್ಮಾರ್ಟ್ ಕಾರ್ಡ್ ಪಾಸ್ ನಲ್ಲೇ ವಿದ್ಯಾರ್ಥಿಗಳು ಸೇವೆ ಪಡೆದು ಕೊಳ್ಳುವಂತೆ ಸೂಚನೆ ನೀಡಿದೆ. ಜೊತೆಗೆ ಪಾಸ್ ಇಲ್ಲದಿದ್ದಲ್ಲಿ ಶಾಲೆ-ಕಾಲೇಜು ಸೇರಿರುವ ಶುಲ್ಕದ‌ ರಸೀದಿ ಅಥವಾ ಸ್ಕೂಲ್-ಕಾಲೇಜ್ ಐಡಿ ಕಾರ್ಡ್ ತೋರಿಸಿ ಸಂಚಾರ ನಡೆಸಬಹುದು. ಮುಂದಿನ ಆದೇಶದ ವರೆಗೆ ಈ ವ್ಯವಸ್ಥೆ ಜಾರಿಯಲ್ಲಿರಲಿದೆ ಎಂದು ಬಿಎಂಟಿಸಿ‌ ಸ್ಪಷ್ಟನೆ ನೀಡಿದೆ.

ಸೋಮವಾರದಿಂದ ಶಾಲೆ ಆರಂಭವಾಗುತ್ತಿರುವ ಕುರಿತು ಇಂದು ಮಾತನಾಡಿರುವ ಕಂದಾಯ ಸಚಿವ ಆರ್ ಅಶೋಕ್, ಬೆಂಗಳೂರಿನಲ್ಲಿ ಕಾರ್ಪೊರೇಷನ್ ಶಾಲೆ, ಸರ್ಕಾರಿ‌ಶಾಲೆ ಕೂಡ ತೆರೆಯಬೇಕು. ಎಷ್ಟು ಜನ ಇರಬೇಕು ಅಂತ ಈಗಾಗಲೇ ನಿರ್ಧಾರ ಆಗಿದೆ. ಶಾಲೆಗಳು ಶಿಕ್ಷಣ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಶಾಲೆಯಿಂದ ಕೋವಿಡ್ ಹರಡಬಾರದು. ಈ ಸಂಬಂಧ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ತರಗತಿಯಲ್ಲಿ ಹೆಚ್ಚು ಮಕ್ಕಳು ಇರದಂತೆ, ಸಾಮಾಜಿಕ ಅಂತರ ಕಾಪಾಡಬೇಕು ಎಂದು ಕಟ್ಟು ನಿಟ್ಟಿನ ಸೂಚನೆಯನ್ನು ಮತ್ತೊಮ್ಮೆ ನೀಡಿದ್ದಾರೆ.

9 ನೇ ತರಗತಿಗಳು ಹೇಗೆ ನಡೆಯಲಿದೆ ಎಂಬುದನ್ನು ಪರಿಗಣಿಸಿ 7 ಮತ್ತು 8ನೇ ತರಗತಿ ಕೂಡ ನೋಡಿಕೊಂಡು ತೆರೆಯಲಾಗುವುದು ಎಂದಿದ್ದಾರೆ.

ಶಾಲೆಗೆ ಭೇಟಿ ನೀಡುತ್ತೇನೆ- ಸಿಎಂ

ಇನ್ನು ಶಾಲೆ ಆರಂಭದ ಕುರಿತು ಇಂದು ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಲೆ ಆರಂಭಕ್ಕೆ ಸಕಲ ಸಿದ್ದತೆ ನಡೆಸಲಾಗಿದೆ. ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಾಗಬೇಕು ಎಂಬುದು ನಮ್ಮ ಅಪೇಕ್ಷೆ. ಶಾಲೆ ಆರಂಭವಾದ ಬಳಿಕ ನಾನು ಕೂಡ ಕೆಲ ಶಾಲೆಗಳಿಗೆ ಭೇಟಿ ನೀಢಿ ಪರಿಸ್ಥಿತಿ ಅವಲೋಕಿಸುತ್ತೇನೆ ಎಂದರು.

error: Content is protected !! Not allowed copy content from janadhvani.com