ರಿಯಾದ್: ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿಯನ್ನು ನಿಂದಿಸಿದ ಯುವಕನನ್ನು ಬಂಧಿಸಲಾಗಿದೆ. ಪ್ರವಾದಿ ಮತ್ತು ಅವರ ಪತ್ನಿ ಆಯಿಷಾ ಅವರನ್ನು ನಿಂದಿಸಿ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಯುವಕನನ್ನು ಬಂಧಿಸಲಾಗಿದೆ ಎಂದು ರಿಯಾದ್ ಪೊಲೀಸ್ ವಕ್ತಾರ ಮೇಜರ್ ಖಾಲಿದ್ ಅಲ್-ಕುರೈದಿಸ್ ಅವರು ಹೇಳಿದ್ದಾರೆ.
30 ವರ್ಷದ ಸೌದಿ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆರೋಪಿ ವಿರುದ್ಧದ ಪ್ರಕರಣವನ್ನು ಸಾರ್ವಜನಿಕ ವಿಚಾರಣೆಗೆ ಹಸ್ತಾಂತರಿಸಲಾಗಿದೆ ಎಂದು ರಿಯಾದ್ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಅಟಾರ್ನಿ ಜನರಲ್ ಶೈಖ್ ಸೌದ್ ಅಲ್-ಮುಜಾಬ್ ಸಂಬಂಧಿತ ಇಲಾಖೆಗೆ ಆರೋಪಿಯನ್ನು ಗುರುತಿಸಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.ಇದರ ಬೆನ್ನಲ್ಲೇ ಆರೋಪಿಯನ್ನು ಭದ್ರತಾ ಪಡೆಗಳು ಬಂಧಿಸಿವೆ.
ಸಾಮಾಜಿಕ ಮಾಧ್ಯಮಗಳ ಮೂಲಕ ಧಾರ್ಮಿಕ ಸಂಕೇತಗಳು, ಇಸ್ಲಾಮಿಕ್ ಮೌಲ್ಯಗಳು ಮತ್ತು ಸಾರ್ವಜನಿಕ ಸಂಸ್ಕೃತಿಗೆ ಹಾನಿ ಮಾಡುವುದು ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಮೂರು ಮಿಲಿಯನ್ ರಿಯಾಲ್ ವರೆಗೆ ದಂಡ ವಿಧಿಸಬಹುದಾದ ಅಪರಾಧವಾಗಿದೆ.
ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಅಂತಹ ವ್ಯಕ್ತಿಗಳನ್ನು ನ್ಯಾಯಾಲಯದ ಮುಂದೆ ತರುವ ಪ್ರಯತ್ನ ಮುಂದುವರಿಯುತ್ತದೆ ಎಂದು ಪಬ್ಲಿಕ್ ಪ್ರಾಸಿಕ್ಯೂಷನ್ ಮೂಲಗಳು ತಿಳಿಸಿವೆ.