ನವದೆಹಲಿ: ಕೋವಿಡ್-19 3ನೇ ಅಲೆ ನಿರ್ವಹಣೆ ವಿಚಾರವಾಗಿ ಕೇಂದ್ರ ಸರ್ಕಾರ ಮಹತ್ವದ ಎಚ್ಚರಿಕೆ ನೀಡಿದ್ದು, ಕೊಂಚ ನಿರ್ಲಕ್ಷ್ಯ ವಹಿಸಿದರೂ ಪರಿಸ್ಥಿತಿ ಕೈ ಮೀರುತ್ತದೆ ಎಂದು ಹೇಳಿದೆ.
ಭಾರತ ಈಗಾಗಲೇ ಕೋವಿಡ್-19 2ಅಲೆಯಿಂದಾಗಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ತತ್ತರಿಸಿಹೋಗಿದ್ದು, ಇದೀಗ ಕೆಲವೇ ದಿನಗಳ ಅಂತರದಲ್ಲಿ ಮೂರನೇ ಅಲೆಯ ಭೀತಿ ಆರಂಭವಾಗಿದೆ. ಇದೇ ವಿಚಾರವಾಗಿ ಕಳೆದ ಕೆಲ ವಾರಗಳಿಂದಲು ಕೇಂದ್ರ ಸರ್ಕಾರ ಮತ್ತು ಕೇಂದ್ರ ಆರೋಗ್ಯ ಇಲಾಖೆ ಕಠಿಣ ಎಚ್ಚರಿಕೆಗಳನ್ನು ನೀಡುತ್ತಾಬಂದಿದ್ದು, ಇದೀಗ ಇದೇ ವಿಚಾರವಾಗಿ ನೀತಿ ಆಯೋಗ ಆರೋಗ್ಯ ವಿಭಾಗ ಕೂಡ ಮಹತ್ವದ ಎಚ್ಚರಿಕೆ ನೀಡಿದೆ.
ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ.ವಿ.ಕೆ ಪಾಲ್ ಅವರು, ‘ಭಾರತದ ಕೋವಿಡ್-19 3ನೇ ಅಲೆಯ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ 100 ರಿಂದ 125 ದಿನಗಳು ಅತ್ಯಂತ ನಿರ್ಣಾಯಕವಾದದ್ದು. ಇತ್ತೀಚಿನ ದಿನಗಳಲ್ಲಿ ಹೊಸ ಪ್ರಕರಣಗಳಲ್ಲಿನ ಕುಸಿತವು ನಿಧಾನವಾಗಿದೆ. ಇದು ಖಂಡಿತಾ ನಮದೆ ಎಚ್ಚರಿಕೆಯ ಸಂಕೇತವಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಭಾರತದ ಲಸಿಕೀಕರಣ ಕುರಿತು ಮಾತನಾಡಿದ ಅವರು, ನೀತಿ ಆಯೋಗ ಮತ್ತು ಐಸಿಎಂಆರ್ ನಡೆಸಿದ ಅಧ್ಯಯನವೊಂದರ ವರದಿಯನ್ನು ಹಂಚಿಕೊಂಡರು. ಈ ವರದಿಯನ್ವಯ ಹೆಚ್ಚಿನ ಅಪಾಯಕಾರಿ ವರ್ಗದ ಪೊಲೀಸ್ ಸಿಬ್ಬಂದಿಗಳಲ್ಲಿ ಲಸಿಕೆ ಪರಿಣಾಮಕಾರಿತ್ವವನ್ನು ವಿಶ್ಲೇಷಿಸಲಾಗಿದೆ. ಕೋವಿಡ್ 2ನೇ ಅಲೆಯಲ್ಲಿ ಶೇ.95 ರಷ್ಟು ಕೋವಿಡ್-19 ಸಾವುಗಳನ್ನು ತಡೆಗಟ್ಟುವಲ್ಲಿ ಎರಡು ಪ್ರಮಾಣದ ಕೋವಿಡ್ ಲಸಿಕೆ ಯಶಸ್ವಿಯಾಗಿದೆ ಎಂದು ಅಧ್ಯಯನವು ತೋರಿಸುತ್ತದೆ.
“ಒಂದು ಡೋಸ್ ಲಸಿಕೆ ಮರಣ ಪ್ರಮಾಣವನ್ನು ಶೇಕಡಾ 82 ರಷ್ಟು ಕಡಿಮೆ ಮಾಡಲು ಸಾಧ್ಯವಾಗಿದ್ದು, ಎರಡನೇ ಅಲೆಯಲ್ಲಿ ಕೋವಿಡ್-19 ನಿಂದ ಉಂಟಾಗುವ ಶೇ. 95 ರಷ್ಟು ಸಾವುಗಳನ್ನು ತಡೆಗಟ್ಟುವಲ್ಲಿ ಎರಡು ಪ್ರಮಾಣದ ಲಸಿಕೆ ಯಶಸ್ವಿಯಾಗಿದೆ. ನಾವು ಜುಲೈ ಗೂ ಮೊದಲು 50 ಕೋಟಿ ಡೋಸೇಜ್ ನೀಡುವ ನಿಗದಿತ ಗುರಿಯತ್ತ ಸಾಗುತ್ತಿದ್ದೇವೆ. ನಾವು ಅದನ್ನು ಸಾಧಿಸುವ ಹಾದಿಯಲ್ಲಿದ್ದೇವೆ. ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ 66 ಕೋಟಿ ಡೋಸ್ ಗಳಿಗೆ ಸರ್ಕಾರ ಆದೇಶಿಸಿದೆ. ಹೆಚ್ಚುವರಿಯಾಗಿ, 22 ಕೋಟಿ ಡೋಸ್ ಲಸಿಕೆ ಖಾಸಗಿ ವಲಯಕ್ಕೆ ಹೋಗುತ್ತದೆ ಎಂದು ಅವರು ಹೇಳಿದರು.
ಇದೇ ವೇಳೆ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಅವರು, ‘ದೇಶದಲ್ಲಿ ಕೋವಿಡ್-19 ಮೂರನೇ ಅಲೆ ಇರಬಾರದು ಎಂಬ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ನಾವು ಚಟುವಟಿಕೆಗಳನ್ನು ಪುನರಾರಂಭಿಸುವಾಗ ಫೇಸ್ ಮಾಸ್ಕ್ ಬಳಕೆಯಲ್ಲಿನ ಕುಸಿತವನ್ನು ವಿಶ್ಲೇಷಣೆಯು ತೋರಿಸುತ್ತದೆ. ಫೇಸ್ ಮಾಸ್ಕ್ ಗಳ ಬಳಕೆಯನ್ನು ನಾವು ನಮ್ಮ ಜೀವನದಲ್ಲಿ ಹೊಸ ಅಂಶವಾಗಿ ಸೇರಿಸಿಕೊಳ್ಳಬೇಕು ಎಂದು ಹೇಳಿದರು.