janadhvani

Kannada Online News Paper

ರಾಜ್ಯದಲ್ಲಿ ವ್ಯಾಪಕ ಮಳೆ : 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಬೆಂಗಳೂರು: ಬಂಗಾಳ ಉಪ ಸಾಗರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ, ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಹಾಗಾಗಿ, ಭಾನುವಾರ ರಾಜ್ಯದಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಸಿ. ಎಸ್‌. ಪಾಟೀಲ್‌ ತಿಳಿಸಿದ್ದಾರೆ.

ಕರಾವಳಿ, ಮಲೆನಾಡಿನಲ್ಲಿ ರೆಡ್‌ ಅಲರ್ಟ್‌
ಬಂಗಾಳ ಉಪಸಾಗರದ ಪಶ್ಚಿಮ ಮಧ್ಯ ಭಾಗದಲ್ಲಿ ಭಾನುವಾರ ವಾಯುಭಾರ ಕುಸಿತ ಆಗಲಿದೆ. ಇದರಿಂದ ರಾಜ್ಯದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಜುಲೈ 14ರ ತನಕ ವ್ಯಾಪಕ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನದಲ್ಲಿ ಭಾನುವಾರ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಜುಲೈ 12 ಮತ್ತು 13 ರಂದು ಆರೆಂಜ್‌ ಅಲರ್ಟ್‌ ಹಾಗೂ ಜುಲೈ 14 ರಂದು ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿಗೆ ಶನಿವಾರದಿಂದ ಆರೆಂಜ್‌ ಅಲರ್ಟ್‌, ನಾಡದೋಣಿ ಮೀನುಗಾರಿಕೆ ಕೂಡ ಸ್ಥಗಿತ
ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್
ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ಬಿಜಾಪುರ, ಯಾದಗಿರಿ, ರಾಯಚೂರು, ಬೀದರ್‌, ಕಲಬುರಗಿ ಹಾಗೂ ಚಾಮರಾಜನಗರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಜುಲೈ 14ರವರೆಗೆ ಯಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳವರೆಗೆ ಸಾಧಾರಣ ಮಳೆಯಾಗುವ ಹೆಚ್ಚಿನ ಸಾಧ್ಯತೆ ಇದೆ ಎಂದು ಸಿ. ಎಸ್‌. ಪಾಟೀಲ್‌ ತಿಳಿಸಿದ್ದಾರೆ.