ಬೆಂಗಳೂರು,ಜೂ. 28: ಕೊರೋನಾದಿಂದಾಗಿ ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಿರುವ ರಾಜ್ಯ ಸರ್ಕಾರ ಜುಲೈ 19ರಿಂದ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಈ ವರ್ಷ 2 ದಿನ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯಲಿದೆ. ಜುಲೈ 19ರಂದು ವಿಜ್ಞಾನ, ಸಮಾಜ ವಿಜ್ಞಾನ, ಗಣಿತ ಪರೀಕ್ಷೆ ನಡೆಯಲಿದೆ. ಜುಲೈ 22ರಂದು ಕನ್ನಡ, ಇಂಗ್ಲಿಷ್, ಹಿಂದಿ ಪರೀಕ್ಷೆಗಳು ನಡೆಯಲಿವೆ.
ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುವ ಜುಲೈ 19 ಮತ್ತು 22ರಂದು ಪರೀಕ್ಷೆ ನಡೆಯುವ 200 ಮೀ. ಸುತ್ತಳತೆಯಲ್ಲಿ ಸೆಕ್ಷನ್ 144 (ನಿಷೇಧಾಜ್ಞೆ) ಜಾರಿಗೊಳಿಸಲಾಗುವುದು. ಈ ವರ್ಷ ಸರಳವಾದ ಮಾದರಿಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲಾಗುವುದು. ಓಎಂಆರ್ ಶೀಟ್ನಲ್ಲಿ ವಿದ್ಯಾರ್ಥಿಗಳು ಉತ್ತರಗಳನ್ನು ಭರ್ತಿ ಮಾಡಬೇಕು. ಜುಲೈ 19 ಮತ್ತು 22ರಂದು ಬೆಳಗ್ಗೆ 10.30ರಿಂದ 1.30ರವರೆಗೆ ಪರೀಕ್ಷೆಗಳು ನಡೆಯಲಿವೆ.
10,000 ವಿದ್ಯಾರ್ಥಿಗಳು ತಮ್ಮ ಅಕ್ಕಪಕ್ಕದ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಜೂನ್ 30ರಂದು ಎಲ್ಲ ಶಾಲೆಗಳ ಮುಖ್ಯಸ್ಥರಿಗೆ ಹಾಲ್ ಟಿಕೆಟ್ ಕಳುಹಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 8,76,581 ವಿದ್ಯಾರ್ಥಿಗಳು ಪರೀಕ್ಷೆಗೆ ಭಾಗಿಯಾಗುತ್ತಿದ್ದಾರೆ. ಕಳೆದ ಬಾರಿ 8,46,000 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ವರ್ಷ 73,066 ಪರೀಕ್ಷಾ ಕೇಂದ್ರಗಳು ಇರಲಿವೆ. ಆರೋಗ್ಯ ಇಲಾಖೆ ಪರೀಕ್ಷೆ ಬಗ್ಗೆ ವಿಸ್ತೃತವಾದ ಎಸ್ ಓಪಿ ನೀಡಿದೆ. ಈ ವರ್ಷ ಎರಡು ದಿನ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದ್ದು, ಬಹು ಆಯ್ಕೆಯ ಪ್ರಶ್ನೆಗಳು ಇರುತ್ತವೆ. ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ಜುಲೈ 19ರಂದು ಮತ್ತು ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯ ಪರೀಕ್ಷೆಗಳು ಜುಲೈ 22ರಂದು ನಡೆಯಲಿವೆ.
ಗಡಿಜಿಲ್ಲೆಗಳಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಬೇಕು ಅನ್ನೋದ್ರ ಬಗ್ಗೆ ಸೂಚನೆ ನೀಡಿದ್ದೇವೆ. ಕೊರೊನಾ ಲಕ್ಷಣಗಳನ್ನು ಹೊಂದಿದರೆ, ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಲಾಗುವುದು.
ಪಾಸಿಟಿವ್ ಆಗಿ ಪರೀಕ್ಷೆ ಬರೆಯುವ ಆಸೆ ಇದ್ರೆ ಕೋವಿಡ್ ಕೇರ್ ಸೆಂಟರ್ ನಿಂದ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಪರೀಕ್ಷೆಯಲ್ಲಿ ಭಾಗಿಯಾಗಲಿರೋ ಎಲ್ಲ ಅಧಿಕಾರಿಗಳು, ಶಿಕ್ಷಕರಿಗೆ ವ್ಯಾಕ್ಸಿನ್ ಮಾಡಿಸಿಕೊಳ್ಳಬೇಕು. ಒಂದು ವಾರದ ಒಳಗೆ ಎಲ್ಲರೂ ವ್ಯಾಕ್ಸಿನ್ ಮಾಡಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯಿಂದ ಆದೇಶ ಹೋಗಲಿದೆ.
ತಮ್ಮ ಊರಲ್ಲೇ ಪರೀಕ್ಷೆ ಬರೆಯಬಹುದು!:
ಈ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆ ಅತ್ಯಂತ ಸರಳವಾಗಿ ಇರುತ್ತದೆ. ಪರೀಕ್ಷಾ ಕೇಂದ್ರಗಳ ಸುತ್ತಾಮುತ್ತಾ ನಿಷೇಧಾಜ್ಞೆ ಜಾರಿ ಮಾಡಲಾಗುತ್ತದೆ. ಈ ಬಾರಿ ವಲಸೆ ಹೋದ ವಿದ್ಯಾರ್ಥಿಗಳಿಗೆ ಅವರ ಹಳ್ಳಿಗಳಲ್ಲೇ ಪರೀಕ್ಷೆ ಬರೆಯಬಹುದು. ಗಡಿ ಜಿಲ್ಲೆಗಳಲ್ಲಿ ವಿಶೇಷ ಕಟ್ಟೆಚ್ಚರ ವಹಿಸಲಾಗುವುದು. ಪರೀಕ್ಷಾ ಸಿಬ್ಬಂದಿಗೆ N95 ಕಡ್ಡಾಯಗೊಳಿಸಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ N95 ಕಡ್ಡಾಯ ಇಲ್ಲ. ಬಟ್ಟೆಯ ಮಾಸ್ಕ್ ವಿದ್ಯಾರ್ಥಿಗಳಿಗೆ ಬಳಸಿದರೆ ಸಾಕು ಎಂದು ಸಲಹಾ ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಪರೀಕ್ಷೆಯ ದಿನ ಎಲ್ಲ ಸಿಬ್ಬಂದಿ ಬೆಳಗ್ಗೆ 8.30ರೊಳಗೆ ಪರೀಕ್ಷಾ ಕೇಂದ್ರದ ಒಳಗೆ ಇರಬೇಕು. ಶಿಕ್ಷಕರಲ್ಲಿ ಕರೊನಾ ಲಕ್ಷಣಗಳು ಇದ್ದರೆ, ಅವರನ್ನ ಪರೀಕ್ಷಾ ಕೆಲಸಕ್ಕೆ ತೆಗೆದುಕೊಳ್ಳುವ ಹಾಗಿಲ್ಲ. ಮಕ್ಕಳು ಕೇಂದ್ರಕ್ಕೆ ಬರುವಾಗ ಹೋಗುವಾಗ ಸ್ಯಾನಿಟೈಸರ್ ಮಾಡ್ಬೇಕು. ಯಾವುದಾದ್ರೂ ವಿದ್ಯಾರ್ಥಿಗಳಿಗೆ ಕರೊನಾದಿಂದ ಪರೀಕ್ಷೆ ಬರೆಯೋದಕ್ಕೆ ಆಗದಿದ್ದರೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಆ ವಿದ್ಯಾರ್ಥಿಯನ್ನ ಫ್ರೆಷರ್ ಎಂದು ಭಾವಿಸಲಾಗುತ್ತದೆ. ಹೀಗಾಗಿ, ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.