janadhvani

Kannada Online News Paper

ಮಂಗಳಾದೇವಿ ದೇವಸ್ಥಾನದಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮದುವೆ- ಅಧಿಕಾರಿಗಳಿಂದ ದಾಳಿ

ಮಂಗಳೂರು: ಲಾಕ್‌ಡೌನ್ ನಿಯಮ ಉಲ್ಲಂಘಿಸಿ ನಗರದ ಮಂಗಳಾದೇವಿ ದೇವಸ್ಥಾನದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಉಪವಿಭಾಗ ಅಧಿಕಾರಿ ಮದನ್ ಮೋಹನ್ ನೇತೃತ್ವದ ದಾಳಿ ನಡೆಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‌ಡೌನ್ ಘೋಷಣೆಯಾದ ದಿನದಿಂದ ಮಂಗಳಾದೇವಿ ದೇವಸ್ಥಾನದ ಪ್ರವೇಶ ದ್ವಾರಕ್ಕೆ ಗೇಟ್ ಹಾಕಿ ಭಕ್ತರಿಗೆ, ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಆದರೆ ದೇವಸ್ಥಾನದ ಪ್ರಾಂಗಣದಲ್ಲಿ ಅದ್ದೂರಿ ಅಲಂಕಾರ ಮಾಡಿಕೊಂಡು ಮಾಜಿ ಕಾರ್ಪೊರೇಟರೊಬ್ಬರ ಮಗಳ ಮದುವೆಯನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ದೇವಳ ಹೊರಾಂಗಣದಲ್ಲಿ 50ಕ್ಕೂ ಅಧಿಕ ಕಾರುಗಳು ಸಾಲುಗಟ್ಟಿ ನಿಂತಿದ್ದವು. ಮದುವೆ ಸಭಾಂಗಣದಲ್ಲಿ ಮ್ಯೂಸಿಕ್ ಕೂಡಾ ಹಾಕಲಾಗಿತ್ತು.

ಲಾಕ್‌ಡೌನ್ ಅವಧಿಯಲ್ಲಿ ಆಯೋಜಿಸಲಾದ ನೂರಾರು ಮದುವೆಯನ್ನು ಮುಂದೂಡಲಾಗಿದೆ. ಅದರ ಮಧ್ಯೆಯೂ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮಂಗಳಾದೇವಿ ದೇವಸ್ಥಾನದಲ್ಲಿ ಮದುವೆ ಆಯೋಜಿಸಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಎಸಿ ಮದನ್ ಮೋಹನ್: ಮದುವೆ ಆಯೋಜನೆ ಬಗ್ಗೆ ಮಾಹಿತಿ ಪಡೆದ ಉಪವಿಭಾಗ ಅಧಿಕಾರಿ ಮದನ್ ಮೋಹನ್ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಲಾಕ್‌ಡೌನ್ ಉಲ್ಲಂಘನೆ ಮಾಡಿ ಅದ್ದೂರಿ ಮದುವೆ ಆಯೋಜಿಸಿರುವುದು ಕಂಡು ಬಂದಿದೆ. ಈ ಕಾರಣದಿಂದ ದೇವಸ್ಥಾನದ ಆಡಳಿತ ಮೊಕ್ತೇಸರ, ಸಿಬ್ಬಂದಿ ಹಾಗೂ ಮದುವೆ ಆಯೋಜಕರನ್ನು ವಿಚಾರಣೆ ನಡೆಸಿದ್ದಾರೆ.

ಈ ಬಗ್ಗೆ ಎಸಿ ಮದನ್ ಮೋಹನ್ ಮಾತನಾಡಿ, ‘ಮಂಗಳಾದೇವಿ ದೇವಸ್ಥಾನದಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡಿ ಮದುವೆ ನಡೆಯುತ್ತಿರುವ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಈ ಬಗ್ಗೆ ಧಾರ್ಮಿಕ ಇಲಾಖೆಯ ಸಹಾಯ ಆಯುಕ್ತರಿಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ವರದಿ ಬಂದ ಬಳಿಕ ಗಂಭೀರತೆಯ ಮೇಲೆ ಪ್ರಕರಣ ದಾಖಲಿಸಲಾಗವುದು’ ಎಂದರು.

error: Content is protected !! Not allowed copy content from janadhvani.com