janadhvani

Kannada Online News Paper

ಕೊರೋನಾ: ರಾಜ್ಯದ ಜನತೆಗೆ ಆರ್ಥಿಕ ಸಂಕಷ್ಟ- ಸರ್ಕಾರದ ನಾಯಕರು ಕುರ್ಚಿಗಾಗಿ ಕಿತ್ತಾಟ

ಬೆಂಗಳೂರು,ಜೂನ್.16: ಇಡೀ ರಾಜ್ಯ ಕೊರೋನಾದಿಂದಾಗಿ ತತ್ತರಿಸಿ ಹೋಗಿದೆ. ಸಾವಿರಾರು ಸಾವು ನೋವುಗಳ ಜೊತೆಗೆ ಜನ ಆರ್ಥಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಲಾಕ್ಡೌನ್ನಿಂದಾಗಿ ಇಡೀ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಆದರೆ, ಇಂತಹ ಸಂದರ್ಭದಲ್ಲಿ ಜನರಿಗೆ ನೆರವಾಗಬೇಕಿದ್ದ ಬಿಜೆಪಿ ರಾಜ್ಯ ಸರ್ಕಾರದ ನಾಯಕರು ಕುರ್ಚಿಗಾಗಿ ಕಿತ್ತಾಟ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಆ ಸ್ಥಾನದಿಂದ ಇಳಿಸಲು ಬಿಜೆಪಿ ಪಕ್ಷದ ಒಂದು ಬಣ ಕಾರ್ಯಾಚರಣೆಗೆ ಮುಂದಾಗಿದೆ. ಪರಿಣಾಮ ಪಕ್ಷದೊಳಗಿನ ಭಿನ್ನಮತವನ್ನು ಶಮನ ಮಾಡುವ ಉದ್ದೇಶದಿಂದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮೂರು ದಿನಗಳ ಪ್ರವಾಸಕ್ಕೆ ರಾಜ್ಯಕ್ಕೆ ಆಗಮಿಸಿದ್ದಾರೆ. ಬಿಜೆಪಿಯೊಳಗಿನ ಈ ಅಧಿಕಾರದ ಕಿತ್ತಾಟವನ್ನು “ಜನತೆ ಭೀಕರ ಸ್ಥಿತಿಯಲ್ಲಿ, ಬಿಜೆಪಿ ಕುರ್ಚಿ ಕದನದಲ್ಲಿ” ಎಂದು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಇಂದು ಕಟು ಶಬ್ಧಗಳ ಮೂಲಕ ಟೀಕಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿದ್ದು, “ಅಂದು ಇವರ ಅತೃಪ್ತಿ, ಇಂದು ಬೇರೆಯವರ ಅತೃಪ್ತಿ, ಅತೃಪ್ತರಿಂದ ಸೃಷ್ಟಿಯಾದ ಸರ್ಕಾರದ ಅತೃಪ್ತಿ ಬೆಳೆಯುತ್ತಲೇ ಇದೆ! ಒಟ್ಟಿನಲ್ಲಿ ಈ ಬಿಜೆಪಿ ಸರ್ಕಾರವನ್ನ “ಅತೃಪ್ತ ಸರ್ಕಾರ” ಎನ್ನಬಹುದು! ಭಾರಿ ಗೌರವದ ನಿರೀಕ್ಷೆಯಲ್ಲಿ ಹೋದ ಅತೃಪ್ತರಿಗೆ ಬಿಜೆಪಿಯಲ್ಲಿ ಈ ಅತಂತ್ರ ಸ್ಥಿತಿ ಬರಬಾರದಿತ್ತು! ಜನತೆ ಭೀಕರ ಸ್ಥಿತಿಯಲ್ಲಿ, ಬಿಜೆಪಿ ಕುರ್ಚಿ ಕದನದಲ್ಲಿದೆ” ಎಂದು ಕಿಡಿಕಾರಿದೆ.

ಇನ್ನೂ ಮಾಜಿ ಸಿಎಂ ಸಿದ್ದರಾಮಯ್ಯ ಸಹ ಸರಣಿ ಟ್ವೀಟ್ ಮಾಡುವ ಮೂಲಕ ಬಿಜೆಪಿ ಪಕ್ಷದ ರಾಜಕೀಯ ಚಟುವಟಿಕೆಯನ್ನು ಟೀಕಿಸಿದ್ದು, “ಮುನಿದಿರುವ ಪ್ರಕೃತಿ ಅಲ್ಪ ದಯೆತೋರುತ್ತಿರುವ ಕಾರಣದಿಂದಾಗಿಯೋ ಏನೋ, ಕೊರೊನಾ ಸೋಂಕು ಸ್ವಲ್ಪ ತಹಬಂದಿಗೆ ಬರುತ್ತಿದೆ. ಅಷ್ಟರಲ್ಲಿ ಕರ್ನಾಟಕದ ಬಿಜೆಪಿ ಸರ್ಕಾರದಲ್ಲಿ ಭಿನ್ನಮತದ ಜಗಳ ತಾರಕಕ್ಕೇರಿ ಆಡಳಿತ ಯಂತ್ರ ಸಂಪೂರ್ಣ ಸ್ಥಬ್ಧವಾಗಿರುವುದು ರಾಜ್ಯದ ಜನರ ದೌರ್ಭಾಗ್ಯ.

ಕಚೇರಿಯಲ್ಲಿ ಕೂತು ಕೆಲಸಮಾಡಬೇಕಾದ ಸಚಿವರು ಮತ್ತು ಕ್ಷೇತ್ರದಲ್ಲಿ ಜನರ ಜೊತೆ ಇರಬೇಕಾದ ಬಿಜೆಪಿ ಶಾಸಕರು ದೆಹಲಿಯಿಂದ ಬಂದಿರುವ ಹೈಕಮಾಂಡ್ ಪ್ರತಿನಿಧಿ ಮುಂದೆ ಅಹವಾಲು ಸಲ್ಲಿಸಲು ಕ್ಯೂನಲ್ಲಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಪರ-ವಿರೋಧಿ ಬಣಗಳ ಕಿತ್ತಾಟದಲ್ಲಿ ಜನರ ನೋವನ್ನು ಕೇಳೋರು ಯಾರು?” ಎಂದು ಅಸಮಾಧಾನ ಹೊರಹಾಕಿದ್ದಾರೆ.

ಮತ್ತೊಂದು ಟ್ವೀಟ್ನಲ್ಲಿ, “ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಕೊರೋನಾ ನಿಯಂತ್ರಣಕ್ಕೆ ಬಂದಿಲ್ಲ, ಲಸಿಕೆ ನೀಡಿಕೆಯ ಕಾರ್ಯ ಕುಂಟುತ್ತಾ ಸಾಗಿದೆ, ಇನ್ನೊಂದೆಡೆ ಕೊರೋನಾ ಮೂರನೇ ಅಲೆಯ ಬಗ್ಗೆ ತಜ್ಞರು ನಿರಂತರವಾಗಿ ಎಚ್ಚರಿಸುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ತನ್ನ ಉಳಿವಿಗಾಗಿ ಹೋರಾಡುತ್ತಿದ್ದಾರೆ, ಜನರನ್ನು ಉಳಿಸುವರು ಯಾರು?

ಪಕ್ಷಾಂತರಿಗಳ ಅನೈತಿಕ ಬಲದಿಂದ ಬಂದ ಅಧಿಕಾರವನ್ನು ಅನುಭವಿಸುತ್ತಿರುವ ರಾಜ್ಯ ಬಿಜೆಪಿ ಮೂಲನಿವಾಸಿ ನಾಯಕರು ಈಗ ಅವರ ವಿರುದ್ಧವೇ ತಿರುಗಿ ಬಿದ್ದಿರುವುದು ಪ್ರಕೃತಿಯ ಸಹಜ ನ್ಯಾಯವೇ ಸರಿ. ಈಗಲೂ ಕಾಲ ಮಿಂಚಿಲ್ಲ, ಇಂತಹ ಅನೈತಿಕ ಬೆಂಬಲ ಬೇಡವೆಂದಾದರೆ ಪಕ್ಷಾಂತರಿಗಳನ್ನು ಕಿತ್ತು ಹಾಕಿ, ಯಾಕೆ ಗೋಳಾಡುತ್ತೀರಿ?

ಕೊರೋನಾ ವಿರುದ್ಧ ನಿರ್ಣಾಯಕ ಹೋರಾಟ ನಡೆಸಲು ರಾಜ್ಯಕ್ಕೆ ಸುಭದ್ರ ಸರ್ಕಾರದ ಅಗತ್ಯ ಇದೆ. ಯಡಿಯೂರಪ್ಪ ಅವರನ್ನು ಇಟ್ಟುಕೊಳ್ತಿರಾ? ಕಿತ್ತುಹಾಕ್ತೀರಾ? ಎಂಬುದು ಬಿಜೆಪಿಗೆ ಸಂಬಂಧಿಸಿದ ವಿಚಾರ. ಆದರೆ, ಶೀಘ್ರ ನಿರ್ಧಾರಕ್ಕೆ ಬಂದು ರಾಜ್ಯಕ್ಕೊಂದು ಸುಭದ್ರವಾದ ಸರ್ಕಾರ ಕೊಡಿ, ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ತೊಲಗಿಹೋಗಿ” ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

error: Content is protected !! Not allowed copy content from janadhvani.com