ಇಂದೋರ್ : ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಮೊದಲಿಗೆ ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂಧ್ರ) ಕಾಣಿಸಿಕೊಂಡಿತು. ಬಳಿಕ ವೈಟ್ ಫಂಗಸ್ (ಬಿಳಿ ಶಿಲೀಂಧ್ರ) , ಆನಂತರ ಯೆಲ್ಲೋ ಫಂಗಸ್ (ಹಳದಿ ಶಿಲೀಂಧ್ರ) ಪತ್ತೆಯಾಗಿತ್ತು. ಈಗ ಹೊಸದಾಗಿ ಗ್ರೀನ್ ಫಂಗಸ್ (ಹಸಿರು ಶಿಲೀಂಧ್ರ) ಸೋಂಕು ಕಾಣಿಸಿಕೊಳ್ಳಲು ಶುರುವಾಗಿದೆ. ಹೌದು, ಮಧ್ಯಪ್ರದೇಶದ ಇಂದೋರ್ ನಲ್ಲಿ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿ ಗ್ರೀನ್ ಫಂಗಸ್ ಪತ್ತೆಯಾಗಿರುವುದು ಖಚಿತವಾಗಿದೆ.
34 ವರ್ಷದ ಕೋವಿಡ್(COVID-19) ಗುಣಮುಖ ವ್ಯಕ್ತಿಯಲ್ಲಿ ಗ್ರೀನ್ ಫಂಗಸ್ ಪತ್ತೆಯಾಗಿದ್ದು, ಇದು ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಲು ಕಾರಣವಾಗಿದೆ. ಗ್ರೀನ್ ಫಂಗಸ್ ಪತ್ತೆಯಾದ ಕೂಡಲೇ ಆ ವ್ಯಕ್ತಿಯನ್ನು ಏರ್ ಆ್ಯಂಬುಲೆನ್ಸ್ ಮೂಲಕ ಮುಂಬೈಗೆ ಶಿಫ್ಟ್ ಮಾಡಲಾಗಿದೆ ಎಂದು ಹಿರಿಯ ವೈದ್ಯರೊಬ್ಬರು ಹೇಳಿದ್ದಾರೆ.
ಕೊರೋನಾ ಸೋಂಕಿನಿಂದ ಚೇತರಿಸಿಕೊಂಡಿರುವ ವ್ಯಕ್ತಿಗೆ ಬ್ಲ್ಯಾಕ್ ಫಂಗಸ್ (mucormycosis)ನ ಲಕ್ಷಣಗಳು ಕಂಡು ಬಂದಿದ್ದವು. ಅದೇ ಅನುಮಾನದ ಮೇರೆಗೆ ತಪಾಸಣೆಗೆ ಒಳಪಡಿಸಲಾಗಿತ್ತು. ಆದರೆ ಆತನ ಶ್ವಾಸಕೋಸಗಳು ಹಾಗೂ ರಕ್ತದಲ್ಲಿ ಹಸಿರು ಶಿಲೀಂಧ್ರ(Aspergillosis) ಸೋಂಕು ಪತ್ತೆಯಾಗಿದೆ ಎಂದು ಶ್ರೀ ಅರಬಿಂದೋ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಸೈಮ್ಸ್) ವಿಭಾಗದ ಮುಖ್ಯಸ್ಥ ಡಾ.ರವಿ. ದೋಸಿ ಹೇಳಿದ್ದಾರೆ.
ಕೋವಿಡ್-19ನಿಂದ ಗುಣಮುಖರಾದ ಜನರಲ್ಲಿ ಹಸಿರು ಶಿಲೀಂಧ್ರ ಸೋಂಕಿನ ಸ್ವರೂಪವು ಇತರೆ ರೋಗಿಗಳಿಗಿಂತ ಭಿನ್ನವಾಗಿದೆಯೇ ಎಂಬ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಡಾ.ದೋಸಿ ತಿಳಿಸಿದ್ದಾರೆ.