ಲಕ್ನೋ: ಕೇಂದ್ರ ಸರ್ಕಾರ ಕಳೆದ ವಾರ ರಚಿಸಿದ ರಾಮ ಮಂದಿರ ಟ್ರಸ್ಟ್ ಅಕ್ರಮ ಭೂ ಒಪ್ಪಂದ ಮಾಡಿಕೊಂಡಿದೆ ಎಂದು ಉತ್ತರ ಪ್ರದೇಶದ ವಿರೋಧ ಪಕ್ಷಗಳು ಆರೋಪಿಸಿವೆ. ಕಳೆದ ಮಾರ್ಚ್‌ನಲ್ಲಿ ಈ ವ್ಯವಹಾರ ನಡೆದಿದೆ ಎಂದು ಸಮಾಜವಾದಿ ಪಕ್ಷ ಹಾಗೂ ಆಮ್ ಆದಿ ಪಕ್ಷ ಆರೋಪಿಸಿವೆ.
ಇಬ್ಬರು ರಿಯಲ್ ಎಸ್ಟೇಟ್ ಡೀಲರ್‌ಗಳು ವ್ಯಕ್ತಿಯೊಬ್ಬರಿಂದ 2 ಕೋಟಿ ರೂಪಾಯಿಗೆ ಆಸ್ತಿಯೊಂದನ್ನು ಖರೀದಿಸಿ, ಕೆಲವೇ ನಿಮಿಷಗಳಲ್ಲಿ ಅದನ್ನು ಟ್ರಸ್ಟ್‌ಗೆ 18.5 ಕೋಟಿ ರೂಪಾಯಿಗೆ ಮಾರಾಟ ಮಾಡಿವೆ ಎಂದು ಆರೋಪಿಸಲಾಗಿದೆ. ಇದನ್ನು ಟ್ರಸ್ಟ್ ನಿರಾಕರಿಸಿದೆ.
ಸ್ಥಳೀಯ ಬಿಜೆಪಿ ನಾಯಕರು ಮತ್ತು ಟ್ರಸ್ಟಿನ ಕೆಲವು ಸದಸ್ಯರ ಸಮ್ಮತಿಯೊಂದಿಗೆ ಈ ಅಕ್ರಮ ಭೂ ಒಪ್ಪಂದ ನಡೆದಿದೆ ಎಂದು ಅಯೋಧ್ಯಾದಲ್ಲಿ ಸಮಾಜವಾದಿ ಪಕ್ಷದ ಮಾಜಿ ಶಾಸಕ ಪವನ್ ಪಾಂಡೆ ಭಾನುವಾರ ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಅವರು ಪ್ರದರ್ಶಿಸಿದ್ದಾರೆ. ಈ ವ್ಯವಹಾರಕ್ಕೆ ಅಯೋಧ್ಯಾದ ಮೇಯರ್ ಹಾಗೂ ಟ್ರಸ್ಟ್‌ನ ಸ್ಥಳೀಯ ಸದಸ್ಯರೊಬ್ಬರು ಸಾಕ್ಷಿಗಳಾಗಿ ಸಹಿ ಹಾಕಿದ್ದರು ಎಂದು ತಿಳಿಸಿದ್ದಾರೆ.
ಕೋಟ್ಯಂತರ ಜನರು ರಾಮ ಮಂದಿರ ಟ್ರಸ್ಟ್‌ಗೆ ದೇಣಿಗೆಗಳನ್ನು ನೀಡಿದ್ದಾರೆ. ದೇಣಿಗೆಗಾಗಿ ತಮ್ಮ ಉಳಿತಾಯದ ಹಣವನ್ನು ನೀಡಿದ್ದಾರೆ. ಅವರ ಹಣವನ್ನು ಬಳಸಿಕೊಂಡು ಈ ರೀತಿ ಮಾಡುವುದಾದರೆ ಇದು ದೇಶದ 120 ಕೋಟಿ ಜನರಿಗೆ ಮಾಡುವ ಅವಮಾನ ಎಂದು ಅವರು ಆರೋಪಿಸಿದ್ದಾರೆ.
ಎಎಪಿಯಿಂದಲೂ ಆರೋಪ
ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಎಎಪಿ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಕೂಡ ಇದೇ ಆರೋಪ ಮಾಡಿದರು. ‘ಶ್ರೀರಾಮನ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯಲಿದೆ ಎಂಬುದನ್ನು ಯಾರೂ ಊಹಿಸಿರಲಿಲ್ಲ. ಆದರೆ ಕೋಟ್ಯಂತರ ರೂಪಾಯಿ ವಂಚನೆ ನಡೆದಿದೆ ಎಂಬುದನ್ನು ಈ ದಾಖಲೆಗಳು ತೋರಿಸುತ್ತವೆ’ ಎಂದು ಅವರು ಹೇಳಿದ್ದಾರೆ.