janadhvani

Kannada Online News Paper

ನಾಳೆಯಿಂದ ಅನ್‌ಲಾಕ್‌: ಮಧ್ಯಾಹ್ಮ 2 ಗಂಟೆ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ

ಬೆಂಗಳೂರು: ಸೋಮವಾರದಿಂದ ಮೊದಲ ಹಂತದ ಅನ್‌ಲಾಕ್‌ ಪ್ರಕ್ರಿಯೆ ಆರಂಭವಾಗಲಿದೆ. ಬೆಳಗ್ಗೆ 6 ಗಂಟೆಯಿಂದ ಅನ್‌ಲಾಕ್‌ ಜಾರಿಗೆ ಬರಲಿದ್ದು ಮಧ್ಯಾಹ್ಮ 2 ಗಂಟೆಯ ವರೆಗೂ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಸದ್ಯ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಅನ್‌ಲಾಕ್‌ ಪ್ರಕ್ರಿಯೆ ಆರಂಭಗೊಂಡಿದ್ದರೂ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಸರ್ಕಾರ ಮನವಿ ಮಾಡಿಕೊಂಡಿದೆ.

ಅನ್‌ಲಾಕ್‌ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಯನ್ನು ಸರ್ಕಾರ ಈಗಾಗಲೇ ಬಿಡುಗಡೆಗೊಳಿಸಿದ್ದು 11 ಜಿಲ್ಲೆಗಳನ್ನು (ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಬೆಳಗಾವಿ, ಕೊಡಗು) ಹೊರತುಪಡಿಸಿ ಉಳಿದೆಡೆ ಇದು ಜಾರಿಗೆ ಬರಲಿದೆ. ಜೂನ್‌ 14ರ ಬೆಳಿಗ್ಗೆ 6 ಗಂಟೆಯಿಂದ ಜೂನ್‌ 21ರ ಬೆಳಿಗ್ಗೆ 6 ಗಂಟೆವರೆಗೆ ಜಾರಿಯಲ್ಲಿ ಇರಲಿದೆ.

ಎಲ್ಲಾ ಕೈಗಾರಿಕೆಗಳು, ಉತ್ಪಾದನಾ ಘಟಕಗಳು ಕೊರೊನಾ ಮಾರ್ಗಸೂಚಿ ಪಾಲನೆಯೊಂದಿಗೆ ಶೇ. 50 ಸಿಬ್ಬಂದಿಗಳ ಹಾಜರಿಯೊಂದಿಗೆ ಕಾರ್ಯನಿರ್ವಹಿಸಬಹುದು. ಆದರೆ ಗಾರ್ಮೆಂಟ್ಸ್‌ಗೆ ಮಾತ್ರ ಕೊರೊನಾ ಮಾರ್ಗಸೂಚಿ ಕಡ್ಡಾಯ ಪಾಲನೆಯೊಂದಿಗೆ ಶೇ. 30 ಸಿಬ್ಬಂದಿಯ ಹಾಜರಾತಿಯೊಂದಿಗೆ ಕಾರ್ಯನಿರ್ವಹಿಸಲು ಸರ್ಕಾರ ಸೂಚನೆ ನೀಡಿದೆ.
ಅಲ್ಲದೆ ,ಅಗತ್ಯ ವಸ್ತುಗಳ ಅಂಗಡಿಗಳನ್ನು – ಆಹಾರ, ದಿನಸಿ, ಹಣ್ಣು, ತರಕಾರಿ, ಮೀನು, ಮಾಂಸ, ಡೈರಿ ಉತ್ಪನ್ನಗಳು, ಹಾಲಿನ ಬೂತ್‌, ಪ್ರಾಣಿಗಳ ಆಹಾರ – ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ತೆರೆಯಬಹುದು, ಬೀದಿ ಬದಿ ವ್ಯಾಪಾರಕ್ಕೆ, ನ್ಯಾಯಬೆಲೆ ಅಂಗಡಿ, ಬಾರ್‌ಗಳನ್ನು ತೆರೆಯಲು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೂ ಸರ್ಕಾರ ಅನುಮತಿ ನೀಡಿದೆ.

ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೇ ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭಗೊಳ್ಳಲಿದೆ. ಇಂತಹ ಸಂದರ್ಭದಲ್ಲಿ ಜನರ ಓಡಾಟ ಕೂಡಾ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಿಎಂ ಬಿಎಸ್‌ ಯಡಿಯೂರಪ್ಪ, ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಸೇರಿದಂತೆ ತಜ್ಞರೂ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರು ಮನೆಯಿಂದ ಹೊರಬಂದರೂ ತಮ್ಮ ಎಚ್ಚರಿಕೆಯನ್ನು ಪಾಲನೆ ಮಾಡಬೇಕು. ಎಲ್ಲ ರೀತಿಯ ಕೋವಿಡ್ ಮುನ್ನೆಚ್ಚರಿಕೆಗಳು, ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಇಲ್ಲದಿದ್ದರೆ ಸದ್ಯ ನಿಯಂತ್ರಣದಲ್ಲಿ ಇರುವ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ತೀವ್ರ ಸ್ವರೂಪದಲ್ಲಿ ಏರಿಕೆ ಆಗುವ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

ಈ ನಿಟ್ಟಿನಲ್ಲಿ ಜನರು ಎಚ್ಚರಿಕೆಯನ್ನು ಹಾಗೂ ಮುಂಜಾಗರೂಕತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಿದೆ. ಖರೀದಿ ಸಂದರ್ಭದಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್‌ ಧಾರಣೆಯನ್ನು ಪಾಲಿಸಬೇಕಾಗಿದೆ. ಈ ಮೂಲಕ ಸೋಂಕು ನಿಯಂತ್ರಣಕ್ಕೆ ಶ್ರಮಿಸಬೇಕಾಗಿದೆ. ಅನ್‌ಲಾಕ್‌ ಎಂದು ಏಕಾಏಕಿ ಎಲ್ಲವನ್ನು ಗಾಳಿಗೆ ತೂರಿ ನಿಯಮ ಪಾಲನೆ ಮಾಡದೇ ಇದ್ದರೆ ಮತ್ತಷ್ಟು ಅನಾಹುತಕ್ಕೆ ನಾವೇ ಕಾರಣರಾಗುತ್ತೇವೆ ಎಂಬುವುದನ್ನು ಮರೆಯಬಾರದು.

error: Content is protected !! Not allowed copy content from janadhvani.com