ನವದೆಹಲಿ:ನೆರೆ ರಾಷ್ಟ್ರಗಳಿಂದ ಮುಸ್ಲಿಮೇತರ ವಲಸಿಗರಿಂದ ಪೌರತ್ವಕ್ಕಾಗಿ ಅರ್ಜಿ ಆಹ್ವಾನಿಸಿ ಗೃಹ ಸಚಿವಾಲಯದಿಂದ ಹೊರಡಿಸಲಾಗಿರುವ ವಿವಾದಿತ ಅಧಿಸೂಚನೆಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ(ಪಿಐಎಲ್) ದಾಖಲಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ – 2019ರ ಅಧೀನದ ನಿಯಮಗಳನ್ನು ಇನ್ನೂ ರೂಪಿಸಲಾಗಿಲ್ಲ. ಈ ಮಧ್ಯೆ ಗೃಹ ಸಚಿವಾಲಯದ ಗೆಝೆಟೆಡ್ ಅಧಿಸೂಚನೆಯ ಮೂಲಕ ಮೇ 28ರಂದು ಗುಜರಾತ್, ರಾಜಸ್ತಾನ, ಛತ್ತೀಸ್ ಗಢ್, ಹರ್ಯಾಣ ಮತ್ತು ಪಂಜಾಬಿನ 13 ಜಿಲ್ಲೆಗಳಲ್ಲಿ ಪ್ರಸಕ್ತ ನೆಲೆಸಿರುವ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದು, ಸಿಖ್, ಜೈನ ಕ್ರಿಶ್ಚಿಯನ್ ಮತ್ತು ಬೌದ್ಧರಿಂದ ಪೌರತ್ವಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಗೃಹ ಸಚಿವಾಲಯದ ಈ ಅಧಿಸೂಚನೆಯು ಸಿಎಎಯನ್ನು ಹಿಂಬಾಗಿಲ ಮೂಲಕ ಅನುಷ್ಠಾನಗೊಳಿಸುವ ಒಂದು ಪ್ರಯತ್ನವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆರೋಪಿಸಿದೆ.
ಇದು ಪೌರತ್ವ ಕಾಯ್ದೆ- 1955ರ ಸೆಕ್ಷನ್ 5 ಮತ್ತು 6 ಅಡಿಯಲ್ಲಿ ನೋಂದಾಯಿಸಿ ತಮ್ಮ ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ಪೌರತ್ವ ಪಡೆಯುವುದನ್ನು ತಡೆಯುತ್ತದೆ ಮತ್ತು ಇದು ಭಾರತೀಯ ಸಂವಿಧಾನದ ಅನುಚ್ಛೇಧ 14ನ್ನು ಉಲ್ಲಂಘಿಸುತ್ತದೆ. ಈ ನಿಟ್ಟಿನಲ್ಲಿ ಈ ಅಧಿಸೂಚನೆಯು ಅಸಾಂವಿಧಾನಿಕ, ತಾರತಮ್ಯದಿಂದ ಕೂಡಿದೆ ಎಂದು ಘೋಷಿಸಬೇಕೆಂದು ಅನೀಸ್ ಅಹ್ಮದ್ ಸುಪ್ರೀಂ ಕೋರ್ಟ್ ನಲ್ಲಿ ದಾಖಲಿಸಿರುವ ಪಿಐಎಲ್ ನಲ್ಲಿ ಮನವಿ ಮಾಡಿದ್ದಾರೆ. ಪೌರತ್ವ ಕಾಯ್ದೆ 1955ರ ಸೆಕ್ಷನ್ 5 ಮತ್ತು 6ರನ್ನು ಉಲ್ಲಂಘಿಸಿ ಹೊರಡಿಸಲಾಗಿರುವ ಈ ವಿವಾದಿತ ಗೆಝೆಟೆಡ್ ಅಧಿಸೂಚನೆಯನ್ನು ಪರಿಶೀಲಿಸಬೇಕೆಂದೂ ಅವರು ಪಿಐಎಲ್ ನಲ್ಲಿ ಕೋರಿದ್ದಾರೆ. ಜೊತೆಗೆ ಪೌರತ್ವ ಕಾಯ್ದೆ – 1955ರ ಸೆಕ್ಷನ್ 16ರ ಮರೆಯಲ್ಲಿ ಕೇಂದ್ರ ಸರಕಾರವು ನಡೆಸುತ್ತಿರುವ ‘ಆಡಳಿತದ ಕಪಟ ಪ್ರಯೋಗ’ವನ್ನು ತಡೆಯಬೇಕೆಂದೂ ಅವರು ಆಗ್ರಹಿಸಿದ್ದಾರೆ.