ನವದೆಹಲಿ: ಕೇಂದ್ರ ಗೃಹ ಸಚಿವಾಲಯವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ಪ್ರಾರಂಭಿಸಿದೆ. ಗುಜರಾತ್, ರಾಜಸ್ಥಾನ, ಛತ್ತೀಸ್ ಘಡ, ಹರಿಯಾಣ ಮತ್ತು ಪಂಜಾಬ್ ನ 13 ಜಿಲ್ಲೆಗಳಲ್ಲಿ ವಾಸಿಸುತ್ತಿರುವ
ಅಪ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕೆ ಸೇರಿದ ಹಿಂದೂ, ಸಿಖ್, ಜೈನ್, ಬುದ್ಧ, ಕ್ರಿಶ್ಚಿಯನ್ ಸೇರಿದಂತಹ ಮುಸ್ಲಿಂಯೇತರ ನಿರಾಶ್ರಿತರಿಂದ ಭಾರತೀಯ ಪೌರತ್ವಕ್ಕಾಗಿ ಕೇಂದ್ರ ಸರ್ಕಾರ ಅರ್ಜಿಯನ್ನು ಆಹ್ವಾನಿಸಿದೆ.ಅವರು ಡಿಸೆಂಬರ್ 31, 2014 ರೊಳಗೆ ಭಾರತಕ್ಕೆ ಆಗಮಿಸಿದವರಾಗಿರಬೇಕು.
ಪೌರತ್ವ ಕಾಯ್ದೆ 1955 ಮತ್ತು 2009 ರಲ್ಲಿ ಕಾನೂನಿನಡಿಯಲ್ಲಿ ರೂಪಿಸಲಾದ ನಿಯಮಗಳ ಅಡಿಯಲ್ಲಿ ಆದೇಶವನ್ನು ತಕ್ಷಣ ಜಾರಿಗೆ ತರಲು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.ಹೊಸ ಆದೇಶವು 2019 ರಲ್ಲಿ ಜಾರಿಗೆ ಬಂದ ಪೌರತ್ವ ತಿದ್ದುಪಡಿ ಕಾಯ್ದೆಗೆ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿಲ್ಲ ಎಂದು ಕೇಂದ್ರ ಹೇಳಿದೆ.
2019 ರಲ್ಲಿ ಅಂಗೀಕರಿಸಿದ ತಿದ್ದುಪಡಿಯ ನಿಯಮಗಳನ್ನು ಜಾರಿಗೆ ತರಲು ಆರು ತಿಂಗಳ ಅವಧಿಯ ನಂತರ ಕೇಂದ್ರವು ಎರಡು ಬಾರಿ ಸಮಯ ವಿಸ್ತರಣೆ ಕೇಳಿದೆ. ಲೋಕಸಭೆ ನಿಗದಿಪಡಿಸಿದ ಸಮಯ ಕಳೆದ ತಿಂಗಳು ಕೊನೆಗೊಂಡಿದೆ. ರಾಜ್ಯಸಭೆ ನಿಗದಿಪಡಿಸಿದ ಸಮಯ ಜುಲೈನಲ್ಲಿ ಕೊನೆಗೊಳ್ಳಲಿದೆ. ಆದರೆ ಇಲ್ಲಿಯವರೆಗೆ ಕೇಂದ್ರವು ನಿಯಮಗಳನ್ನು ರೂಪಿಸಿಲ್ಲ. ಏತನ್ಮಧ್ಯೆ, ಈ ಆದೇಶವನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ತೋರಿಸುವ ಗೃಹ ಸಚಿವಾಲಯ ಆದೇಶ ಹೊರಡಿಸಿದ್ದು, ರಾಷ್ಟ್ರವ್ಯಾಪಿ ಪ್ರತಿಭಟನೆಗೆ ನಾಂದಿ ಹಾಡಿದ ವಿವಾದಾತ್ಮಕ “ಪೌರತ್ವ ತಿದ್ದುಪಡಿ ಕಾನೂನು”ನ್ನು ಸದ್ದಿಲ್ಲದೆ ಜಾರಿಗೆ ತರುವ ಕೇಂದ್ರದ ಹುನ್ನಾರವಾಗಿದೆ ಎಂದು ಆರೋಪಿಸಲಾಗಿದೆ.
2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಾಗ, ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದವು. ದೆಹಲಿಯಲ್ಲಿ 2020ರ ಆರಂಭದಲ್ಲಿ ಹಿಂಸಾಚಾರವೇ ನಡೆದಿತ್ತು.ಆದರೆ ಕೋವಿಡ್ ವಿಸ್ತರಣೆಯ ಹಿನ್ನೆಲೆಯಲ್ಲಿ ಹೋರಾಟಗಳು ತಣ್ಣಗಾದವು.
ಭಾರತೀಯ ಪೌರತ್ವವು ಧರ್ಮ ಅಥವಾ ಜಾತಿಯ ಹೆಸರಿನಲ್ಲಿ ಇರಬಾರದು ಎಂಬ ಸಂವಿಧಾನದ ಮೂಲ ತತ್ವವನ್ನು ಉಲ್ಲಂಘಿಸಲಾಗಿದ್ದು, ಇದರ ವಿರುದ್ಧ ದೇಶದಾದ್ಯಂತ ವ್ಯಾಪಕ ಪ್ರತಿಭಟನೆ ನಡೆದಿದೆ.