ಕೋಲ್ಕತ್ತಾ,ಮೇ.02: ಪಶ್ಚಿಮ ಬಂಗಾಳಕ್ಕೆ ಕಳೆದ ಒಂದು ತಿಂಗಳ ಅವಧಿಯಲ್ಲಿ 8 ಹಂತದಲ್ಲಿ ಚುನಾವಣೆ ನಡೆಸಲಾಗಿತ್ತು. ಇಂದು ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಟಿಎಂಸಿ ಜಯಭೇರಿ ಸಾಧಿಸಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 217 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ತನ್ನ ಅಧಿಕಾರವನ್ನು ಉಳಿಸಿಕೊಂಡಿದೆ. ಮತ್ತೊಂದೆಡೆ ಬಿಜೆಪಿ ಮೂರಂಕಿ ಗಡಿ ದಾಟದೆ ತೀವ್ರ ಮುಖಭಂಗ ಅನುಭವಿಸಿದೆ. ಈ ಫಲಿತಾಂಶ ಬಿಜೆಪಿ ಪಾಳಯದಲ್ಲಿ ದೊಡ್ಡ ನಿರಾಸೆಯೊಂದನ್ನು ಮೂಡಿಸಿರುವುದು ಸುಳ್ಳಲ್ಲ.
ಆದರೆ, ಈ ನಡುವೆ ನಂದಿಗ್ರಾಮ ಕ್ಷೇತ್ರದಲ್ಲಿ ಆರಂಭದಲ್ಲಿ ಮಮತಾ ಬ್ಯಾನರ್ಜಿ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಲಾಗಿತ್ತು. ಆದರೆ, ಇದೀಗ ದಿಢೀರ್ ಬೆಳವಣಿಗೆಯಲ್ಲಿ ಮಮತಾ ಬ್ಯಾನರ್ಜಿ ಸೋಲನುಭವಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿರುವುದು ಟಿಎಂಸಿ ಪಾಳಯದಲ್ಲಿ ಆತಂಕ ಮೂಡಿಸಿದೆ. ಹೀಗಾಗಿ ಈ ಸೋಲನ್ನು ಒಪ್ಪದ ಮಮತಾ ಬ್ಯಾನರ್ಜಿ ಕೋರ್ಟ್ ಮೊರೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇಂದು ಚುನಾವಣೆ ಮತ ಎಣಿಗೆ ಆರಂಭವಾಗುತ್ತಿದ್ದಂತೆ ಆರಂಭದಲ್ಲಿ ಬಿಜೆಪಿ ಅಭ್ಯರ್ಥಿ ಸುವೆಂಧು ಅಧಿಕಾರಿ ಮುನ್ನಡೆ ಸಾಧಿಸಿದ್ದರೂ ಸಹ ಕೊನೆಯಲ್ಲಿ ಮಮತಾ ಬ್ಯಾನರ್ಜಿ ಭಾರೀ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಮತ್ತೊಂದೆಡೆ ಟಿಎಂಸಿ ಪಕ್ಷವೂ ಸಹ 217 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಜಯಭೇರಿ ಭಾರಿಸಿತ್ತು. ಆದರೆ, 1200 ಮತಗಳ ಅಂತದಲ್ಲಿ ಮಮತಾ ಬ್ಯಾನರ್ಜಿ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಿದ್ದ ಚುನಾವಣಾ ಆಯೋಗ ಮತ್ತೆ ಫಲಿತಾಂಶವನ್ನು ಬದಲಿಸಿ ಸುವೆಂಧು ಅಧಿಕಾರಿ ಗೆದ್ದಿದ್ದಾರೆ ಎಂದು ಘೋಷಿಸಿದೆ. ಇದು ಸಾಮಾನ್ಯವಾಗಿ ಟಿಎಂಸಿ ಪಾಳಯದಲ್ಲಿ ದೊಡ್ಡ ಆಘಾತಕ್ಕೆ ಕಾರಣವಾಗಿದೆ.
ಹೀಗಾಗಿ ಚುನಾವಣಾ ಆಯೋಗದ ನಡೆಯನ್ನು ಖಂಡಿಸಿರುವ ಮಮತಾ ಬ್ಯಾನರ್ಜಿ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಇಡೀ ಬಂಗಾಳವನ್ನೇ ಗೆದ್ದರೂ ಸಹ ಮಮತಾ ಬ್ಯಾನರ್ಜಿ ಸ್ವತಃ ತಾನು ಗೆಲ್ಲಲಾಗದ್ದು ಇದೀಗ ದೊಡ್ಡ ಚರ್ಚೆಗೂ ಕಾರಣವಾಗಿದೆ.