janadhvani

Kannada Online News Paper

ಕೇರಳದಲ್ಲಿ ಪಿಣರಾಯಿ’ವಿಜಯ’ನ್- ಇದೇ ಮೊದಲ ಬಾರಿಗೆ ಆಡಳಿತ ಸರ್ಕಾರ ಮತ್ತೆ ಅಧಿಕಾರಕ್ಕೆ

ತಿರುವನಂತಪುರಂ: ಕೇರಳದಲ್ಲಿ 40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆಡಳಿತರೂಢ ಪಕ್ಷ ಆಡಳಿತ ವಿರೋಧಿ ಅಲೆಯನ್ನು ಮೀರಿ ಸತತ ಎರಡನೇ ಬಾರಿಗೆ ಜಯ ಸಾಧಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್‌ ಇಂತಹದ್ದೊಂದು ಐತಿಹಾಸಿಕ ಸಾಧನೆ ಮೆರೆದಿದೆ.

ಗೆಲುವಿನ ಬಳಿಕ ಸಂಭ್ರಮಾಚರಣೆಗೆ ತೊಡಗದ ಪಿಣರಾಯಿ ವಿಜಯನ್‌ ಎಂದಿನಂತೆ ತಮ್ಮ ಕೊರೊನಾ ನಿಗ್ರಹ ಕೆಲಸವನ್ನು ಮುಂದುವರಿಸಿದ್ದಾರೆ. ಭಾರಿ ಗೆಲುವಿನ ನಂತರ ತಮ್ಮ ಪತ್ರಿಕಾಗೋಷ್ಠಿಯನ್ನೇ ಕೊರೊನಾ ಅಂಕಿ-ಸಂಖ್ಯೆಯೊಂದಿಗೆ ಆರಂಭಿಸಿದ್ದಾರೆ. ಇಂದು ಅಂದರೆ ಭಾನುವಾರ ಕೇರಳದಲ್ಲಿ 31,950 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ, 49 ಸಾವುಗಳು ಸಂಭವಿಸಿವೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

ಎಲ್‌ಡಿಎಫ್‌ ಪರವಾದ ತೀರ್ಪನ್ನು ಕೇರಳದ ಜನರು ನೀಡಿದ್ದಾರೆ. ಕೋವಿಡ್‌-19 ಹರಡುತ್ತಿರುವಾಗ ತುಂಬು ಸಂತೋಷದಿಂದ ಸಂಭ್ರಮಿಸುವ ಸಮಯ ಇದಲ್ಲ. ಇದು ಕೋವಿಡ್‌-19 ವಿರುದ್ಧ ಹೋರಾಟ ಮುಂದುವರಿಸುವ ಸಮಯ ಎಂದು ಪಿಣರಾಯಿ ವಿಜಯನ್‌ ಹೇಳಿದ್ದಾರೆ.

ಬಹುಶಃ ಆಡಳಿತ ವಿರೋಧಿ ಅಲೆಯನ್ನೂ ಮೀರಿ, ಐತಿಹಾಸಿಕ ಜಯ ಸಾಧಿಸಲು ಪಿಣರಾಯಿ ವಿಜಯನ್‌ ಅವರ ಈ ಆಡಳಿತ ಶೈಲಿಯೇ ಕಾರಣ ಎಂದರೂ ತಪ್ಪಲ್ಲ. ಬಿಕ್ಕಟ್ಟಿನ ಸಂದರ್ಭಗಳಲ್ಲಿ ರಾಜ್ಯ ಸರಕಾರ ನಡೆದುಕೊಂಡ ರೀತಿಯನ್ನು ಕೇರಳದ ಜನತೆ ಬಹುವಾಗಿ ಮೆಚ್ಚಿಕೊಂಡಿರುವುದು ಫಲಿತಾಂಶದಲ್ಲಿ ವ್ಯಕ್ತವಾಗಿದೆ.

ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿರುವ ಪಿಣರಾಯಿ ವಿಜಯನ್‌, “ಬಿಜೆಪಿಯ ಉನ್ನತ ನಾಯಕರು ಕೇರಳದಲ್ಲಿ ಸರಕಾರ ರಚಿಸುವತ್ತ ಸಾಗುತ್ತಿದ್ದೇವೆ ಎಂದು ಘೋಷಿಸಿದ್ದರು. ಪ್ರಧಾನಿ, ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ಸೇರಿದಂತೆ ಬಿಜೆಪಿ ಮುಖಂಡರು ಪ್ರಚಾರಕ್ಕಾಗಿ ಇಲ್ಲಿಗೆ ಬಂದಿದ್ದರು, ಆ ಸಂದರ್ಭದಲ್ಲೇ, ಈ ಚುನಾವಣೆಯಲ್ಲಿ ಅವರ ಖಾತೆ ಮುಚ್ಚುತ್ತೇವೆ ಎಂದು ಹೇಳಿದ್ದೆವು,” ಎಂದು ಹೇಳಿದ್ದಾರೆ.
ಕೇರಳದಲ್ಲಿ ಸದ್ಯ ಎಲ್‌ಡಿಎಫ್‌ 97 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, 42 ಕ್ಷೇತ್ರಗಳಲ್ಲಿ ಯುಡಿಎಫ್‌ ಗೆಲುವಿನತ್ತ ಮುಖ ಮಾಡಿದೆ. ಬಿಜೆಪಿ ತನ್ನ ಅಸ್ತಿತ್ವದಲ್ಲಿದ್ದ ಕ್ಷೇತ್ರವನ್ನೂ ಕಳಕೊಂಡು ತೀವ್ರ ಮುಖಭಂಗಕ್ಕೀಡಾಗಿದೆ.

error: Content is protected !! Not allowed copy content from janadhvani.com