ನವದೆಹಲಿ: ಮಲಯಾಳಂ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಅವರ ಚಿಕಿತ್ಸೆಯನ್ನು ಯುಪಿಯಿಂದ ದೆಹಲಿಗೆ ಸ್ಥಳಾಂತರಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಏಮ್ಸ್ ಅಥವಾ ಆರ್ಎಂಎಲ್ ಆಸ್ಪತ್ರೆಗೆ ವರ್ಗಾಯಿಸಿ, ಚಿಕಿತ್ಸೆಯು ಯುಪಿ ಹೊರಗೆ ಇರಬೇಕು ಎಂದು ನ್ಯಾಯಾಲಯವು ತೀರ್ಪು ನೀಡಿದೆ. ನ್ಯಾಯಾಲಯವು ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶಿಸಿದೆ.
ತಜ್ಞ ಚಿಕಿತ್ಸೆಗಾಗಿ ಸಿದ್ದೀಕ್ ಕಾಪ್ಪನ್ ಅವರನ್ನು ದೆಹಲಿ ಆಸ್ಪತ್ರೆಗೆ ವರ್ಗಾಯಿಸಲು ಇರುವ ಅಡೆತಡೆ ಏನು ಎಂದು ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದೆ. ಎಲ್ಲಾ ಮಾನವರ ಜೀವಕ್ಕೆ ಬೆಲೆಯಿದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದ್ದು, ಯುಪಿ ಸರ್ಕಾರ ಸಲ್ಲಿಸಿದ ವೈದ್ಯಕೀಯ ವರದಿಯಲ್ಲಿ ಕಾಪ್ಪನ್‌ಗೆ ಗಂಭೀರ ಆರೋಗ್ಯ ಸಮಸ್ಯೆಗಳಿವೆ ಎಂದು ಹೇಳಿದೆ.
ಹೇಬಿಯಸ್ ಕಾರ್ಪಸ್ ಅರ್ಜಿ, ಜಾಮೀನು ಅರ್ಜಿ ಹಾಗೂ ಮುಖ್ಯ ನ್ಯಾಯಮೂರ್ತಿಗಳಿಗೆ ಲಭಿಸಿದ ಪತ್ರವನ್ನು ಸ್ವೀಕರಿಸುತ್ತಾ ನೂತನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ನ್ಯಾಯಪೀಠ ಯುಪಿ ಸರ್ಕಾರವನ್ನು ಪ್ರಶ್ನಿಸಿದೆ. ಕಾಪ್ಪನ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಪ್ರತಿಯೊಬ್ಬ ವ್ಯಕ್ತಿಯ ಜೀವನವೂ ಮುಖ್ಯವಾಗಿದೆ ಎಂದು ತಿಳಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಆಸ್ಪತ್ರೆಯ ಸೌಲಭ್ಯಗಳನ್ನು ಪಡೆಯುವುದು ಕಷ್ಟ ಎಂಬ ಅರಿವು ನಮಗಿದೆ. ಅವರ ಆರೋಗ್ಯ ಸ್ಥಿತಿ ಕೆಟ್ಟದಾಗಿರುವುದರಿಂದ ಅವರನ್ನು ದೆಹಲಿಯ ಉತ್ತಮ ಆಸ್ಪತ್ರೆಗೆ ದಾಖಲಿಸಿ,ಚೇತರಿಸಿದ ನಂತರ ಯುಪಿಗೆ ಹಿಂತಿರುಗಿಸಬಹುದು ಎಂದು ಅವರು ಹೇಳಿದರು.
ಸಾಲಿಸಿಟರ್ ಜನರಲ್ ನ್ಯಾಯಾಲಯದ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಮಥುರಾ ಮತ್ತು ದೆಹಲಿಯ ತೆರಿಗೆದಾರರ ಹಣದಿಂದ ಇದು ಅಗತ್ಯವಿಲ್ಲ ಎಂದು ಮೆಹ್ತಾ ಉತ್ತರಿಸಿದರು.